ಬೆಂಗಳೂರು:ಮೈಸೂರು ಅರಸರ ಸಂಬಂಧಿ ಎಂದು ಹೇಳಿಕೊಂಡು ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ, ಅವರಿಂದ ಲಕ್ಷ ಲಕ್ಷ ರೂಪಾಯಿ ಪೀಕುತ್ತಿದ್ದ ಆರೋಪಿಯನ್ನ ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.
ಸಿದ್ದಾರ್ಥ್ ಬಂಧಿತ ಆರೋಪಿ. ಈತ ಮ್ಯಾಟ್ರಿಮೋನಿ ಜಾಲತಾಣಗಳನ್ನು ದುರುಪಯೋಗ ಮಾಡಿಕೊಂಡು ಯುವತಿಯರಿಗೆ ವಂಚಿಸಿದ ಗಂಭೀರ ಪ್ರಕರಣದಲ್ಲಿ ಇದೀಗ ಸೆರೆ ಸಿಕ್ಕಿದ್ದಾನೆ.
ಕೊನೆಗೂ ಸಿಕ್ಕ ಮ್ಯಾಟ್ರಿಮೋನಿ ವಂಚಕ ವಂಚನೆ ಹೀಗೆ..
ಸಿದ್ದಾರ್ಥ್ ತಾನು ಮೈಸೂರು ಅರಸರ ಸಂಬಂಧಿ ಎಂದು ಗುರುತಿಸಿಕೊಳ್ಳಲು 'Siddarth Urs' ಎಂಬ ಹೆಸರಿಟ್ಟುಕೊಂಡಿದ್ದ. ಇದೇ ಹೆಸರಿನ ಮೂಲಕ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಹುಡುಗಿಯರ ಜೊತೆ ಚಾಟ್ ಮಾಡುತ್ತಿದ್ದ. ಜೊತೆಗೆ ರಾಜವಂಶಸ್ಥರ ಜೊತೆ ಇರುವ ಯಾವುದೋ ಚಿಕ್ಕ ಹುಡುಗನ ಫೋಟೋ ಕಳಿಸಿ, ನಾನು ಚಿಕ್ಕವನಿದ್ದಾಗ ಹೀಗಿದ್ದೆ ಎಂದೆಲ್ಲಾ ಹೇಳಿ ನಂಬಿಸುತ್ತಿದ್ದ. ತಾನು ಮೈಸೂರು ಸಂಸ್ಥಾನದ ರಾಜವಂಶಸ್ಥರ ಸಂಬಂಧಿ ಎಂದು ಗುರುತಿಸಿಕೊಳ್ಳಲು ಒಂದು ಪ್ರೊಫೈಲ್ ಕೂಡಾ ರೆಡಿ ಮಾಡಿದ್ದನಂತೆ.
7ನೇ ಕ್ಲಾಸ್ ಫೇಲ್
ಈ ಪ್ರೊಫೈಲ್ ಮೂಲಕವೇ ಹುಡುಗಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಈತ, ತಾನು ಯುಎಸ್ಎನಲ್ಲಿ ಮೈಕ್ರೋಸಾಫ್ಟ್ ಇಂಜಿನಿಯರ್ ಎಂದು ಹೇಳುತ್ತಿದ್ದ. ಏಳನೇ ತರಗತಿ ಅನುತ್ತೀರ್ಣನಾಗಿದ್ದರೂ ಇಂಗ್ಲಿಷ್ ಭಾಷೆಯಲ್ಲಿ ಪರಿಣಿತನಾಗಿದ್ದ ಈತ, ಇಂಗ್ಲಿಷ್ ಮತ್ತು ಸ್ಪಾನಿಷ್ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾನೆ. ಈತ ವೈದ್ಯಕೀಯ ಹಾಗೂ ವೈಯುಕ್ತಿಕ ಕಾರಣ ನೀಡಿ ಯುವತಿಯರಿಂದ ಹಣ ಕೀಳುತ್ತಿದ್ದ.
ಆರೋಪಿ ಸಿದ್ದಾರ್ಥ್ ಅಲಿಯಾಸ್ ಸ್ಯಾಂಡಿ ಅಲಿಯಾಸ್ ವಿನಯ್ ಎಂಬ ಮೂರು ಹೆಸರುಗಳಿಂದ ಗುರುತಿಸಿಕೊಂಡಿದ್ದಾನೆ. ಈತನ ವಿರುದ್ಧ ವೈಟ್‌ಫೀಲ್ಡ್ ಸೈಬರ್ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿ ಮೈಸೂರಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಸಿದ್ದಾರ್ಥ್‌ನಿಂದ ಒಂದು ಆ್ಯಪಲ್ ಐ ಪೋನ್, ಸ್ಯಾಮ್ ಸಂಗ್ ನೋಟ್ 9 ಫೋನ್, SBI ಬ್ಯಾಂಕ್ ಡೆಬಿಟ್ ಕಾರ್ಡ್, ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಡೆಬಿಟ್ ಕಾರ್ಡ್, HDFC ಬ್ಯಾಂಕ್ ಡೆಬಿಟ್ ಕಾರ್ಡ್, ಆ್ಯಕ್ಸಿಸ್ ಬ್ಯಾಂಕ್ ಡೆಬಿಟ್ ಕಾರ್ಡ್ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: '1 ನೋಟು ಕೊಟ್ರೆ 3 ಕೊಡ್ತೀವಿ.. ದ್ರಾವಣ ಹಾಕಿ ಹಣ ದ್ವಿಗುಣ ಮಾಡ್ತೀವಿ..' ಸೆರೆ ಸಿಕ್ಕರು ಡಬ್ಲಿಂಗ್ ವಂಚಕರು!
ಪೊಲೀಸರು ಹೇಳಿದ್ದು..
ಈ ಪ್ರಕರಣದ ಕುರಿತು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಮಾತನಾಡಿ, ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಯುವತಿಯೊಬ್ಬರಿಗೆ ಮದುವೆಯಾಗೋದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾನೆ ಎಂದು ದೂರು ಬಂದಿತ್ತು. ಈ ದೂರಿನ ಆಧಾರದ ಮೇಲೆ ಅಕೌಂಟ್ ನಂಬರ್ ಜಾಡು ಹಿಡಿದು ಹೋದ ನಮ್ಮ ಪೊಲೀಸರಿಗೆ ಪಿರಿಯಾಪಟ್ಟಣದಲ್ಲಿ ಆರೋಪಿ ಮಾಹಿತಿ ಸಿಕ್ಕಿದೆ. ಸಿದ್ದಾರ್ಥ್ ಎಂಬ ಹೆಸರಿನ ಬ್ಯಾಂಕ್ ಮಾಹಿತಿ ದೊರೆಯಿತು. ಯುಎಸ್ ಇಂಗ್ಲಿಷ್, ಸ್ಪಾನಿಷ್, ಮಳಯಾಳಂ ಹಾಗು ಕನ್ನಡ ಭಾಷೆಗಳನ್ನು ಸರಾಗವಾಗಿ ಮಾತಾಡುವ ಈತ ಪಿರಿಯಾಪಟ್ಟಣಕ್ಕೆ ಬರುವ ಟೂರಿಸ್ಟ್‌ಗಳ ಬಳಿ ಎಲ್ಲಾ ಭಾಷೆಗಳನ್ನು ಕಲಿತಿದ್ದಾನೆ. ಇಂಟರ್ ನ್ಯಾಷನಲ್ ಕಾಲ್ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಹಾಗೂ ಹೆಣ್ಮಕ್ಕಳ ಬಳಿ ವೈಯಕ್ತಿಕ ಕಾರಣ ನೀಡಿ ಹಣ ಪಡೆಯುತ್ತಿದ್ದ ಎಂದು ಮಾಹಿತಿ ನೀಡಿದರು.
ಬರೋಬ್ಬರಿ 40 ಲಕ್ಷ ರೂ ವಂಚನೆ..
ಆರೋಪಿ ಮೂರು ಪ್ರಕರಣಗಳಲ್ಲಿ 40 ಲಕ್ಷ ವಂಚನೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು. ಯುವತಿಯರಿಂದ ಪಡೆದ ಹಣದಿಂದ ಐಷಾರಾಮಿ ಜೀವನದ ಜೊತೆ ಗ್ಯಾಂಬ್ಲಿಂಗ್ ಮಾಡ್ತಿದ್ದ. ಈತ ಯೂಟ್ಯೂಬ್‌ನಲ್ಲಿ ಕೆಲ ವಿಡಿಯೋಗಳನ್ನು ನೋಡಿ ಪ್ರೇರೇಪಿತನಾಗಿ ವಂಚನೆ ಮಾಡಲು ಮುಂದಾಗಿದ್ದ ಎನ್ನುವ ಸಂಗತಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಎರಡು ವರ್ಷದಿಂದ ಈ ಕೆಲಸ ಮಾಡಿದ್ದಾಗಿ ಮಾಹಿತಿ ಸಿಕ್ಕಿದೆ. ಈತನಿಗೆ ಕೃತ್ಯಕ್ಕೆ ಸಹಾಯ ಮಾಡಿದವರ ಹುಡುಕಾಟ ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದರು.