ಬೆಂಗಳೂರು: ಬಿಜೆಪಿ ಮುಖಂಡರ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಆರೋಪಿ ವಿಚಾರಣೆಯನ್ನ ಸಿಸಿಬಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ತನಿಖೆ ವೇಳೆ ಆರೋಪಿ ಯುವರಾಜ ಅಲಿಯಾಸ್ ಸ್ವಾಮಿ ಕೋಟಿಗಟ್ಟಲೇ ಆಸ್ತಿಯ ಒಡೆಯ ಎಂಬ ರೋಚಕ ವಿಷಯ ಬಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಕುಲಕರ್ಣಿ ನ್ಯಾಯಾಂಗ ಬಂಧನ ಅವಧಿ ಅಂತ್ಯ : ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರು
ಯುವರಾಜ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಬಳಿ ಸಾವಿರ ಕೋಟಿಗೆ ಬೆಲೆ ಬಾಳುವ ಆಸ್ತಿ ಮಾಡಿರುವುದು ಪತ್ತೆಯಾಗಿದೆ. ಅಷ್ಟು ಮಾತ್ರವಲ್ಲದೇ ಸಕಲೇಶಪುರದಲ್ಲಿ 35 ಎಕರೆ ಟೀ ಎಸ್ಟೇಟ್ ಹೊಂದಿದ್ದು, ಎಸ್ಟೇಟ್ನಲ್ಲಿ 61 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಎಲ್ಲಾ ಚೆಕ್ಗಳ ಮೇಲೆ 25 ಲಕ್ಷದಿಂದ ಹಿಡಿದು, 25 ಕೋಟಿ ರೂಪಾಯಿವರೆಗೂ ಬರೆದಿದ್ದಾನೆ ಎನ್ನಲಾಗ್ತಿದೆ. ಯುವರಾಜ ಈ ಚೆಕ್ಗಳಲ್ಲಿ ಯಾರ ಹೆಸರನ್ನು ಬರೆದಿರದ ಕಾರಣ ಚೆಕ್ ಎಲ್ಲಿಂದ, ಯಾರಿಗೆ ತಲುಪುತ್ತಿತ್ತು ಎಂಬುದು ತನಿಖೆ ಬಳಿಕವೇ ತಿಳಿಯಬೇಕಿದೆ.
ಇದನ್ನೂ ಓದಿ: ಬಗೆದಷ್ಟು ಬಯಲಾಗುತ್ತಿದೆ ಯುವರಾಜನ ಮೋಸದ ಜಾಲ: ಹೆಚ್ಚಿನ ವಿಚಾರಣೆಗೆ 5 ದಿನಗಳ ಕಾಲ ವಶಕ್ಕೆ ಪಡೆದ ಸಿಸಿಬಿ
ಯುವರಾಜನ ಆಸ್ತಿಯ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕುತ್ತಿದ್ದು, ಹಿರಿಯ ಬಿಜೆಪಿ ಮುಖಂಡರ ಹೆಸರಲ್ಲಿ ಈತ ಹಲವರಿಗೆ ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದ ಎಂದು ಆರೋಪಿಸಿ ಸಿಸಿಬಿಗೆ ದೂರು ಬಂದಿತ್ತು. ಈ ಸಂಬಂಧ ಯುವರಾಜನ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.