ಕರ್ನಾಟಕ

karnataka

ETV Bharat / state

ರಾಜಕೀಯ ಸ್ವಾತಂತ್ರ್ಯ ಸಿಕ್ಕಿದ್ದರೂ ಸಮಾಜದ ಸ್ವಾತಂತ್ರ್ಯ ಸಿಕ್ಕಿಲ್ಲ: ಮಲ್ಲಿಕಾರ್ಜುನ ಖರ್ಗೆ

ಕೆಪಿಸಿಸಿ ಕಚೇರಿಯಲ್ಲಿ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಮಾಡಲಾಯಿತು. ಈ ವೇಳೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ದೇಶದ ಪ್ರಸ್ತುತ ಸ್ಥಿತಿಗತಿ ಬಗ್ಗೆ ಮಾತನಾಡಿದರು.

ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ

By

Published : Oct 2, 2020, 1:12 PM IST

ಬೆಂಗಳೂರು: ರಾಜಕೀಯ ಸ್ವಾತಂತ್ರ್ಯ ನಮಗೆ ಸಿಕ್ಕಿದೆ. ಆದರೆ ಸಮಾಜದ ಸ್ವಾತಂತ್ರ್ಯ ನಮಗೆ ಇನ್ನೂ‌ ಸಿಕ್ಕಿಲ್ಲ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ವಿಷಾದ ವ್ಯಕ್ತಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಬಳಿಕ ಮಾತನಾಡಿದ ಅವರು, ಯುಪಿಯಲ್ಲಿ‌ ಮಹಿಳೆ, ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಸಾಮಾಜಿಕ ನ್ಯಾಯಕ್ಕಾಗಿಯೇ ರಾಹುಲ್, ಪ್ರಿಯಾಂಕಾ ಅಲ್ಲಿಗೆ ಹೋಗಿದ್ದರು. ಅವರನ್ನು ಹೇಗೆ ನಡೆಸಿಕೊಂಡ್ರು ಅನ್ನೋದು ಗೊತ್ತಿದೆ. ಒಬ್ಬ ಯುವತಿಯನ್ನು ರೇಪ್ ಮಾಡಿ ಕೊಲೆಗೈದರು. ಕೊಲೆಗಡುಕರಿಗೆ ಅಲ್ಲಿ ಮರ್ಯಾದೆ ಕೊಟ್ರು. ಬಲಿಯಾದ ಯುವತಿ ಕುಟುಂಬಕ್ಕೆ ಸಾಂತ್ವನ ಹೇಳಲು ರಾಹುಲ್, ಪ್ರಿಯಾಂಕಾ ಗಾಂಧಿ ಹೊರಟಿದ್ದರು. ಅವರ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ‌ ಬಂದ ಮೇಲೆಯೇ‌ ದೌರ್ಜನ್ಯ ಹೆಚ್ಚಾಗ್ತಿದೆ. ಇಷ್ಟೆಲ್ಲಾ ಆದ್ರೂ ಪ್ರಧಾನಿ‌ ಬಾಯಿಬಿಡ್ತಿಲ್ಲ. ಇದು‌ ದೊಡ್ಡಮಟ್ಟಕ್ಕೆ‌ ಹೋದ ಮೇಲೆ ಟ್ವೀಟ್ ಮಾಡ್ತಾರೆ. ಆರ್​ಎಸ್ಎಸ್​ನವರಿಗೆ ಇಂತದ್ದೇ ಬೇಕು. ಜಾತಿ ಜಾತಿಗಳನ್ನು ಒಡೆದು ಆಳೋಕೆ ಹೊರಟಿದ್ದಾರೆ. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಇತ್ತೀಚೆಗೆ ರೈತರ ಮೇಲೂ‌ ದೌರ್ಜನ್ಯ ಮಾಡ್ತಿದ್ದಾರೆ. ಕಾರ್ಮಿಕರ ಮೇಲೂ‌ ದೌರ್ಜನ್ಯ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನ ತಂದಿದೆ. ಇಂದಲ್ಲ ನಾಳೆ ಜನ ರೊಚ್ಚಿಗೇಳ್ತಾರೆ. ಇದನ್ನ‌ ಬಿಜೆಪಿ ನಾಯಕರು ಅರಿತು‌ಕೊಳ್ಳಬೇಕು. ಚಂಪಾರಣ್ ಚಳುವಳಿಯನ್ನು ರೈತರು ಬೆಂಬಲಿಸಿದ್ದರು. ಅದಕ್ಕೇ ರೈತರನ್ನು ತುಳಿಯೋಕೆ ಮೋದಿ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದುಷ್ಟರ ಕೈಯಲ್ಲಿಂದು ಅಧಿಕಾರ ಸಿಕ್ಕಿದೆ. ಜೈ ಜವಾನ್ ಜೈ ಕಿಸಾನ್ ಮರೆಯಾಗಿದ್ದು, ಮಾರೋ‌ ಜವಾನ್ ಮಾರೋ‌ ಕಿಸಾನ್ ಪ್ರಾರಂಭವಾಗಿದೆ. ಇದು ಪ್ರಧಾನಿ ಮೋದಿಯವರ ಹೊಸ ಸ್ಲೋಗನ್. ನೋಟ್ ಬ್ಯಾನ್ ಮಾಡಿ ಆರ್ಥಿಕ ಪರಿಸ್ಥಿತಿ ಹದಗೆಡಿಸಿದ್ರು. ಲಾಕ್​ಡೌನ್ ಮಾಡಿ ಕಾರ್ಮಿಕರನ್ನು ಮೂರಾಬಟ್ಟೆ ಮಾಡಿದ್ರು ಎಂದು ಕಿಡಿಕಾರಿದರು.

ಕೇವಲ ದೂಷಣೆಯಲ್ಲೇ ಬಿಜೆಪಿಯವರು ತೊಡಗಿದ್ದಾರೆ. ಅಧಿಕಾರ, ಹಣದ ಅಹಂ ಅವರ ನೆತ್ತಿಗೇರಿದೆ. ಅದಕ್ಕೆ ಅವರು ಯಾವ ಯೋಜನೆ ಜಾರಿಗೆ ತರುತ್ತಿಲ್ಲ. ಅಭಿವೃದ್ಧಿಯನ್ನೇ ಅವರು ಮರೆತುಬಿಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.

ಇನ್ನು ಹಲವರ ಬಲಿದಾನದಿಂದ‌ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಇತ್ತೀಚೆಗೆ ಇತಿಹಾಸವನ್ನೇ ಬದಲಾಯಿಸುವ ಕೆಲಸ ನಡೆದಿದೆ. ಸಂವಿಧಾನವನ್ನ ರಕ್ಷಿಸುವ ಕೆಲಸ ಮಾಡಬೇಕಿದೆ ಎಂದು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ವಾಗ್ದಾಳಿ ನಡೆಸಿದರು.

ಉತ್ತರ ಪ್ರದೇಶದಲ್ಲಿ ರಾಹುಲ್, ಪ್ರಿಯಾಂಕಾ ಗಾಂಧಿ ಮೇಲಿನ ಪೊಲೀಸ್ ದೌರ್ಜನ್ಯ ನೋಡಿದ್ದೇವೆ. ಇನ್ನು ಜನಸಾಮಾನ್ಯರ ಗತಿಯೇನಾಗಬಹುದು?. ಮತ್ತೊಮ್ಮೆ ದೇಶ ಎದ್ದೇಳಬೇಕಿದೆ. ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಿದೆ. ಎಲ್ಲಾ ಪಕ್ಷಗಳು ಹೋರಾಟಕ್ಕೆ ಮುಂದಾಗಬೇಕಿದೆ. ಗಾಂಧೀಜಿಯವರಿಂದ ಸ್ಫೂರ್ತಿ ಪಡೆದು‌ ಹೋರಾಡಬೇಕಾಗುತ್ತದೆ ಎಂದು ಕರೆ ನೀಡಿದರು.

ABOUT THE AUTHOR

...view details