ಬೆಂಗಳೂರು:ಜೂನ್ 19ರಂದು ನಡೆಯಲಿರುವರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ ಕಾಂಗ್ರೆಸ್ನ ಏಕೈಕ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಿ ಫಾರಂ ವಿತರಿಸಿದರು.
ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ನ ಏಕೈಕ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದು, ಇವರಿಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಡಿಕೆಶಿ ಅವರು ಬಿ ಫಾರಂ ವಿತರಿಸಿದರು. ಈ ವೇಳೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಕೆಪಿಸಿಸಿ ಅಧ್ಯಕ್ಷರಿಂದ ಬಿ-ಫಾರಂ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ ವಿಧಾನಸೌಧದ ವಿಧಾನಸಭೆ ಕಾರ್ಯದರ್ಶಿಗಳಿಗೆ ರಾಜ್ಯಸಭೆ ನಾಮಪತ್ರವನ್ನು ಖರ್ಗೆ ಇಂದು ಮಧ್ಯಾಹ್ನ ಸಲ್ಲಿಸಲಿದ್ದು, ಇವರ ಜೊತೆ ಇತರೆ ನಾಲ್ವರು ನಾಯಕರು ತೆರಳಲು ಅವಕಾಶವಿದೆ. ಯಾವ್ಯಾವ ನಾಯಕರು ತೆರಳಬೇಕು ಎಂಬ ಬಗ್ಗೆ ಈಗ ಕಾಂಗ್ರೆಸ್ ನಾಯಕರು ವಿಧಾನಸೌಧದ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಒಂದು ಸಭೆ ನಡೆಸಿ ನಿರ್ಧರಿಸಲಿದ್ದಾರೆ.
ನಾಲ್ವರು ನಾಯಕರೊಂದಿಗೆ ತೆರಳಿ ನಾಮಪತ್ರ ಸಲ್ಲಿಸುವುದೋ, ಇಲ್ಲ ಪ್ರತಿ ಸೆಟ್ ಗೆ ತಲಾ ನಾಲ್ವರು ನಾಯಕರನ್ನು ಕರೆಸಿಕೊಳ್ಳುವುದೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
ಒಟ್ಟಾರೆ ಒಮ್ಮತದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್ ಖರ್ಗೆ ಮಾತ್ರ ಸ್ಪರ್ಧಿಸಲಿದ್ದಾರೆ. ಖರ್ಗೆ ಸ್ಪರ್ಧೆಗೆ ಎಲ್ಲಾ ಕಾಂಗ್ರೆಸ್ ನಾಯಕರು ಇಂದಿನ ಸಭೆಯಲ್ಲಿ ಬೆಂಬಲ ಸೂಚಿಸಿದ್ದಾರೆ.