ಬೆಂಗಳೂರು: ಉಪ ಚುನಾವಣೆಯ ಪ್ರಚಾರ ಕೊನೆಯ ಹಂತದಲ್ಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೇ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾತು ಎಲ್ಲೆಡೆ ಹರಿದಾಡುತ್ತಿದ್ದು, ಈ ಮೈತ್ರಿಗೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಾಯಕರಾಗಲಿದ್ದಾರೆ ಎನ್ನಲಾಗಿದೆ.
ಬಿಜೆಪಿಯು ಉಪ ಚುನಾವಣೆಯಲ್ಲಿ ನಿರ್ಧಿಷ್ಟ ಕ್ಷೇತ್ರಗಳನ್ನು ಗೆಲ್ಲಲು ವಿಫಲವಾದಲ್ಲಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ರಚಿಸುವ ನಿರ್ಧಾರ ಮಾಡಿವೆ ಎನ್ನಲಾಗಿದೆ. ಅಲ್ಲದೆ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಆಗಿ ನೇಮಕ ಮಾಡಬೇಕೆಂಬ ಚರ್ಚೆಗಳು ಕೂಡ ಆರಂಭಗೊಂಡಿವೆ.
ಹಲವು ಬಾರಿ ಸಿಎಂ ಪದವಿಯಿಂದ ವಂಚಿತರಾಗಿರುವ ಮಲ್ಲಿಕಾರ್ಜುನ ಖರ್ಗೆ, ಈ ಅವಕಾಶವನ್ನಾದರೂ ಬಳಸಿಕೊಂಡು ರಾಜ್ಯದ ಮುಖ್ಯಮಂತ್ರಿ ಆಗಬೇಕೆನ್ನುವ ಆಸೆ ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಜೆಡಿಎಸ್ ವರಿಷ್ಠ ದೇವೇಗೌಡರು ಬೆಂಬಲ ನೀಡುವುದಿಲ್ಲ. ಹಾಗೆ ಮಲ್ಲಿಕಾರ್ಜುನ ಖರ್ಗೆ ಅವರಿಗಾದರೆ ದೇವೇಗೌಡರು ಪ್ರತಿರೋಧ ವ್ಯಕ್ತಪಡಿಸುವುದಿಲ್ಲ ಎನ್ನುವ ವಿಶ್ವಾಸ ಕಾಂಗ್ರೆಸ್ ಮುಖಂಡರದ್ದಾಗಿದೆ. ಹಾಗಾಗಿ ಉಪಚುನಾವಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮತ್ತು ಜೆಡಿಎಸ್ ಹೆಚ್ಚು ಕ್ಷೇತ್ರಗಳನ್ನು ಗೆದ್ದರೆ ಮಲ್ಲಿಕಾರ್ಜುನ ಖರ್ಗೆ ಅವರ ಸಾರಥ್ಯದಲ್ಲಿ ದೋಸ್ತಿ ಸರ್ಕಾರ ರಚನೆ ಬಗ್ಗೆ ತೆರೆಮರೆಯಲ್ಲಿ ರಾಜಕೀಯ ಲೆಕ್ಕಾಚಾರಗಳು ನಡೆಯತೊಡಗಿವೆ.
ಮಲ್ಲಿಕಾರ್ಜುನ ಖರ್ಗೆಯವರು ಚಿಕ್ಕಬಳ್ಳಾಪುರ ಸೇರಿದಂತೆ ಇತರೆಡೆ ಉಪ ಚುನಾವಣೆ ಫಲಿತಾಂಶದ ನಂತರ ರಾಜ್ಯದ ಜನತೆಗೆ ಶುಭಸುದ್ದಿ ಸಿಗಲಿದೆ ಎಂದು ಸೂಚ್ಯವಾಗಿ ಹೇಳಿರುವುದು, ಖರ್ಗೆ ಬಗ್ಗೆ ಹಲವು ನಿರೀಕ್ಷೆಗಳನ್ನು ಹುಟ್ಟಿಸಿದೆ.