ಬೆಂಗಳೂರು: ಪ್ರಾಮಾಣಿಕತೆ, ನಿಷ್ಠೆಯಿಂದಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಲಭಿಸಿದೆ. ತ್ಯಾಗ, ಹೋರಾಟ, ಬಡವರ ಬಗ್ಗೆ ಅವರು ಚಿಂತನೆ ಹೊಂದಿದ್ದಾರೆ ಎಂದು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಕುರಿತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ಮಲ್ಲಿಕಾರ್ಜುನ ಖರ್ಗೆ ಸ್ವಾಗತಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಆಯೋಜಿಸಿದ್ದ ಸದ್ಭಾವನಾ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ನಾವೆಲ್ಲ ಸರ್ವೋದಯ ಸಮಾವೇಶ ಎಂದು ಕರೆದಿದ್ದೇವೆ. ಮಹಾತ್ಮಾ ಗಾಂಧಿ ಅವರು ಆರಂಭಿಸಿದ್ದ ಸರ್ವೋದಯ ಹಿನ್ನೆಲೆಯಲ್ಲಿ ಇದನ್ನು ಸರ್ವೋದಯ ಎಂದು ಕರೆದಿದ್ದೇವೆ. 52 ವರ್ಷಗಳ ಬಳಿಕ ನಮ್ಮ ರಾಜ್ಯಕ್ಕೆ ಎಐಸಿಸಿ ಅಧ್ಯಕ್ಷ ಸ್ಥಾನ ದೊರೆಕಿದೆ. ಇದು ಐತಿಹಾಸಿಕ ಕ್ಷಣ. ದೇಶದ ಇತಿಹಾಸ ಕಾಂಗ್ರೆಸ್ ಇತಿಹಾಸ. ಯಾರೂ ಕೂಡ ಇದನ್ನ ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.
ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಡೆದಾಗ ಎಐಸಿಸಿ ಚುನಾವಣೆ ನಡೆಯಿತು. ಅವರ ಹೆಸರನ್ನು ಚುನಾವಣೆಗೆ ಸೂಚಿಸುವ ಭಾಗ್ಯ ನಮಗೆ ಸಿಕ್ಕಿತು. 90% ಮತದಾರರು ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ ನಿಂತಿದ್ದರು. ಭಾರತ್ ಜೋಡೋ ಯಾತ್ರೆ ಮುಗಿಯುವುದರೊಳಗೆ ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆ ಆದರು. ಇಡೀ ರಾಷ್ಟಕ್ಕೆ ಶಕ್ತಿ ತುಂಬಲು ಅವರು ಬಂದಿದ್ದಾರೆ. ನಾನು ಕನಕಪುರದ ಬಂಡೆ ಅಲ್ಲ. ಇಡೀ ದೇಶದ ಜನರಿಗೆ, ಬಡವರಿಗೆ ಶಕ್ತಿ ತುಂಬಲು ನಿಂತಿರುವ ಖರ್ಗೆ ಅವರು ಬಂಡೆ ಎಂದು ಹೇಳಿದರು.