ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿಂದು ಕುಂದಗೋಳ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಅವರು ಎಲ್ಲಾ ಪದಾಧಿಕಾರಿಗಳೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕುಂದಗೋಳ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದ ಮಲ್ಲಿಕಾರ್ಜುನ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದರು. ಅಂದು ಅವರು ನೀಡಿದ ಸಹಕಾರ ನಮ್ಮ ಗೆಲುವಿಗೆ ಸಹಕಾರಿಯಾಯಿತು ಎಂದರು.
ಉತ್ತರ ಕರ್ನಾಟಕ ಭಾಗದ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಗೆ ಉತ್ಸುಕರಾಗಿದ್ದು, ನಿಧಾನವಾಗಿ ಹಾಗೂ ಹಂತಹಂತವಾಗಿ ಸೇರ್ಪಡೆ ಮಾಡಿಕೊಳ್ಳೋಣ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಒಂದಿಷ್ಟು ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳೋಣ ಎಂದುಕೊಂಡಿದ್ದೆ. ಆದರೆ ತೀವ್ರ ಒತ್ತಡ ಬರುತ್ತಿರುವ ಹಿನ್ನೆಲೆ ಈ ಕಾರ್ಯಕ್ಕೆ ಮುಂದಾಗಿದ್ದೇನೆ. ಇಲ್ಲಿ ಯಾವುದೇ ಆಶ್ವಾಸನೆಯನ್ನು ನಾವು ಅವರಿಗೆ ನೀಡಿಲ್ಲ, ಅವರು ಕೂಡ ಯಾವುದೇ ಬಯಕೆಯನ್ನು ನಮ್ಮ ಮುಂದೆ ಇಟ್ಟಿಲ್ಲ. ಸಂಭಾವಿತ ರಾಜಕಾರಣಿಯೊಬ್ಬರು ನಮ್ಮ ಪಕ್ಷ ಸೇರ್ಪಡೆಯಾಗುತ್ತಿರುವುದು ಸಂತಸದ ಸಂಗತಿ ಎಂದರು.
ನಮ್ಮ ಪಕ್ಷದ ಶಾಸಕರಾಗಿದ್ದ ಸಿಎಸ್ ಶಿವಳ್ಳಿ ಕೂಡ ಇವರ ನಾಯಕತ್ವವನ್ನು ಸಾಕಷ್ಟು ಬಾರಿ ಕೊಂಡಾಡಿದ್ದರು. ಇಂದು ಇಂತಹ ಒಬ್ಬ ನಾಯಕರನ್ನು ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದು ಸಾಕಷ್ಟು ತಾಲೂಕು ಅಧ್ಯಕ್ಷರುಗಳು, ಮುಖಂಡರು ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿದ್ದಾರೆ. ಧಾರವಾಡ ಭಾಗ ಮಾತ್ರವಲ್ಲ, ಹುಬ್ಬಳ್ಳಿ ಭಾಗದ ಜೆಡಿಎಸ್ ನಾಯಕರು ಕೂಡ ಸೇರ್ಪಡೆಯಾಗುತ್ತಿದ್ದಾರೆ. ಅವರೆಲ್ಲರನ್ನೂ ಸ್ವಾಗತಿಸುತ್ತೇನೆ ಎಂದರು.