ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣ ಎಂದು ಕರೆಯುವ ಮೂಲಕ ಇಡೀ ದೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವಮಾನ ಮಾಡಿದ್ದಾರೆ. ಇದು ಅತ್ಯಂತ ಅವಹೇಳನಕಾರಿ, ಅತ್ಯಂತ ನಾಚಿಕೆಗೇಡಿನ ವಿಚಾರ. ಕೂಡಲೇ ಅವರು ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರ ಅಭಿವೃದ್ಧಿ ಕೆಲಸಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರ ಹೊಟ್ಟೆ ಕಿವುಚುತ್ತಿದೆ. ಹಾಗಾಗಿ ಖರ್ಗೆಯವರು ಪ್ರಧಾನಿಯವರನ್ನು ರಾವಣ ಅಂತ ಕರೆದಿದ್ದಾರೆ.
ಇದು ನಾಚಿಕೆಗೇಡಿನ ವಿಷಯ. ಇಡೀ ಜಗತ್ತೇ ಮೋದಿಯವರ ಕಡೆ ನೋಡುತ್ತಿದೆ. ಹಾಗೆ ನೋಡಿದರೆ ಪ್ರಧಾನಿಯವರನ್ನು ಖರ್ಗೆ ಮುತ್ಸದ್ಧಿ ಅಂತ ಕರೆಯಬೇಕಾಗಿತ್ತು. ಆದರೆ, ರಾವಣ ಎಂದು ಕರೆದು ದೇಶದ ಜನತೆಗೆ ಅವಮಾನ ಮಾಡಿದ್ದಾರೆ. ಹಾಗಾಗಿ ಮಲ್ಲಿಕಾರ್ಜುನ ಖರ್ಗೆಯವರು ಇಡೀ ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಗಡಿ ವಿಚಾರದ ಕುರಿತು ಸಿಎಂ ವಕೀಲರ ಜತೆ ಚರ್ಚೆ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗಿದ್ದಾರೆ. ಮಹಾರಾಷ್ಟ್ರ ಗಡಿ ವಿಚಾರದ ಮಾತುಕತೆಯನ್ನು ವಕೀಲರ ಜತೆ ನಡೆಸಿದ್ದಾರೆ. ಪ್ರಧಾನಿಯವರ ಭೇಟಿ, ನಡ್ಡಾ ಅವರ ಭೇಟಿ ಮಾಡುವುದು ಸಿಎಂ ಪ್ರವಾಸದ ಉದ್ದೇಶದಲ್ಲಿ ಇಲ್ಲ. ನಮ್ಮ ದೆಹಲಿ ನಾಯಕರು ಗುಜರಾತ್ ಚುನಾವಣೆಯಲ್ಲಿ ಬ್ಯುಸಿ ಇದಾರೆ.
ಆದರೆ, ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದಾರೆ. ಸಿಎಂಗೆ ಬಿಜೆಪಿ ವರಿಷ್ಠರ ಅಪಾಯಿಂಟ್ಮೆಂಟ್ ಸಿಕ್ತಿಲ್ಲ ಅಂತ ಕಾಂಗ್ರೆಸ್ ಟೀಕಿಸುತ್ತಿದೆ. ಹಳೆಯ ಪಕ್ಷ ಕಾಂಗ್ರೆಸ್ಗೆ ಮುತ್ಸದ್ಧಿತನವೇ ಇಲ್ಲ. ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಮನೆ ಮುಂದೆ, ರಾಹುಲ್ ಗಾಂಧಿ ಮನೆ ಮುಂದೆ ಯಾವ ರೀತಿ ಕಾಯುತ್ತಿದ್ರು ಅಂತ ನೆನಪಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು.
ರೌಡಿಸಂಗೆ ಪ್ರೋತ್ಸಾಹ ಕೊಟ್ಟಿದ್ದೇ ಕಾಂಗ್ರೆಸ್:ಸೈಲೆಂಟ್ ಸುನೀಲನ ಜತೆ ಬಿಜೆಪಿ ನಾಯಕರ ವೇದಿಕೆ ಹಂಚಿಕೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ರವಿಕುಮಾರ್, ರೌಡಿಸಂಗೆ, ಭಯೋತ್ಪಾದನೆಗೆ ಪ್ರೋತ್ಸಾಹ ಕೊಟ್ಟಿದ್ದೇ ಕಾಂಗ್ರೆಸ್. ಕಾಂಗ್ರೆಸ್ ಅತ್ಯಂತ ದುರವಸ್ಥೆಯಲ್ಲಿದೆ. ಕಾಂಗ್ರೆಸ್ನ ಯೂತ್ ಅಧ್ಯಕ್ಷ ಯಾರು? ಕನ್ಹಯ್ಯ ಕುಮಾರ್ ಇರೋದು ಕಾಂಗ್ರೆಸ್ನಲ್ಲಿ ಅನ್ನೋದು ನೆನಪಿರಲಿ. ಕಾಂಗ್ರೆಸ್ನಲ್ಲಿ ಇರೋ ರೌಡಿಗಳ ಪಟ್ಟಿ ಉದ್ದ ಇದೆ ಎಂದು ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ನೀಡಿದರು.
ಮಲ್ಲಿಕಾರ್ಜುನ ಖರ್ಗೆ ಒಬ್ಬ ಧೃತರಾಷ್ಟ್ರ ಇದ್ದ ಹಾಗೆ. ಖರ್ಗೆಯವರ ಪುತ್ರ ವ್ಯಾಮೋಹದಿಂದ ಕಲಬುರ್ಗಿ ಕಾಂಗ್ರೆಸ್ ಪರಿಸ್ಥಿತಿ ಹೇಗಾಗಿದೆ ಅಂತ ಇಡೀ ರಾಜ್ಯಕ್ಕೇ ಗೊತ್ತು. ಪುತ್ರ ವ್ಯಾಮೋಹದಿಂದ ಅರ್ಹರಾಗಿದ್ದ ಬೇರೆಯವರಿಗೆ ಸಚಿವ ಸ್ಥಾನ ಕೊಡದೇ ಪುತ್ರನಿಗೇ ಕೊಡಿಸಿದ್ದರು. ಖರ್ಗೆಯವರು ಪುತ್ರ ವ್ಯಾಮೋಹದಿಂದ ಹೊರಗೆ ಬರಕ್ಕಾಗಿಲ್ಲ.
ಸೋನಿಯಾಗಾಂಧಿಯವರಿಗೂ ಧೃತರಾಷ್ಟ್ರ ವ್ಯಾಮೋಹವಿದೆ. ಅವರ ಕುಟುಂಬದವರೇ ಉನ್ನತ ಹುದ್ದೆ ಅಲಂಕರಿಸಬೇಕು. ರಾಷ್ಟ್ರಾಧ್ಯಕ್ಷರ ಹುದ್ದೆಗೆ ಬರಬೇಕು ಅಂತ ಬಯಸುವವರು ಸೋನಿಯಾಗಾಂಧಿ. ಆದರೆ, ಈಗ ಖರ್ಗೆ ಅವರನ್ನು ರಬ್ಬರ್ ಸ್ಟಾಂಪ್ ರೀತಿ ಕೂರಿಸಿದ್ದಾರೆ ಎಂದರು.
ಇದನ್ನೂ ಓದಿ:’ಇದು ದೊಡ್ಡ ವಿಷಯವಲ್ಲ': ಮಂಗಳೂರು ಪ್ರಾಧ್ಯಾಪಕರ ವಿವಾದಾತ್ಮಕ ಹೇಳಿಕೆ ಬಗ್ಗೆ ಸಚಿವ ನಾಗೇಶ್ ಪ್ರತಿಕ್ರಿಯೆ