ಬೆಂಗಳೂರು: ಹಲವು ವರ್ಷ ಪಕ್ಷದಲ್ಲಿ ಎಂಜಾಯ್ ಮಾಡಿ ಗುಲಾಂ ನಬಿ ಆಜಾದ್ ಈಗ ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವುದು ಹೋಗುತ್ತಿರುವುದು ಸರಿಯಲ್ಲ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಸದಾಶಿವ ನಗರ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಲಾಂ ನಬಿ ಆಜಾದ್ ರಾಜೀನಾಮೆ ಕೊಟ್ಟಿರುವುದು ಸರಿಯಲ್ಲ. ಪಕ್ಷದಲ್ಲಿ 49 ವರ್ಷದಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಪಕ್ಷದಲ್ಲಿ ಎಲ್ಲ ಅಧಿಕಾರವನ್ನೂ ಪಡೆದಿದ್ದಾರೆ. ಆರು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. 20-25 ವರ್ಷಗಳ ಕಾಲ ಸಚಿವರಾಗಿಯೂ ಇದ್ದರು. ಪಕ್ಷದ ಮಟ್ಟದಲ್ಲೂ ಅತ್ಯುತ್ತಮ ಸ್ಥಾನಗಳನ್ನು ಪಡೆದಿದ್ದರು ಎಂದರು.
ಇದನ್ನೂ ಓದಿ:ನಿಮಗೆ ಇನ್ನಾವ ಸ್ಥಾನ ಬಾಕಿ ಇತ್ತು? ಆಜಾದ್ ರಾಜೀನಾಮೆ ತಾಯಿಗೆ ದ್ರೋಹ ಮಾಡಿದಂತೆ: ಡಿಕೆಶಿ
ಪ್ರಸ್ತುತ ಪಕ್ಷಕ್ಕೆ ಒಳ್ಳೆಯ ಪರಿಸ್ಥಿತಿ ಇಲ್ಲ. ಎಲ್ಲ ಸ್ಥಾನಮಾನ ಪಡೆದು ಈಗ ಪಕ್ಷ ಬಿಡುವಾಗ ನಾಯಕರ ಮೇಲೆ ಆಪಾದನೆ ಮಾಡಿ ಹೋಗಿದ್ದಾರೆ. ನಾನು ಸಂಸತ್ತಿನ ಕೆಳಮನೆಯಲ್ಲಿ 5 ವರ್ಷ ವಿರೋಧ ಪಕ್ಷದ ನಾಯಕನಾಗಿದ್ದೆ. ಈಗ ಮೇಲ್ಮನೆಯಲ್ಲಿ ಒಂದೂವರೆ ವರ್ಷದಿಂದ ವಿಪಕ್ಷ ನಾಯಕನಾಗಿದ್ದೇನೆ. ಅಲ್ಲಿ ಕಣ್ಣೀರು ಹಾಕೋರು ಯಾರು ನನಗೆ ಸಿಗಲಿಲ್ಲ ಎಂದು ಗುಲಾಂ ನಬಿ ಬಗ್ಗೆ ಪ್ರಧಾನಿ ಮೋದಿ ಕಣ್ಣೀರು ಹಾಕಿರುವ ವಿಷಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಖರ್ಗೆ ವ್ಯಂಗ್ಯವಾಡಿದರು.
ಇದೇ ವೇಳೆ ತಮಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಹೌದಾ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ದೆಹಲಿಗೆ ಹೋಗ್ತಾ ಇದ್ದೇನೆ, ವರಿಷ್ಠರನ್ನು ಭೇಟಿಯಾಗುತ್ತಿದ್ದೇನೆ. ಅಲ್ಲಿ ನನಗೆ ಮಾಹಿತಿ ಕೊಟ್ರೆ ಬಂದು ಹೇಳುತ್ತೇನೆ ಎಂದು ಹಾಸ್ಯಮಯವಾಗಿ ಖರ್ಗೆ ಹೇಳಿದ್ರು.
ಇದನ್ನೂ ಓದಿ:ಗುಲಾಬ್ ನಬಿ ರಾಜೀನಾಮೆಯಿಂದ ಕೋಮುವಾದಿ ಶಕ್ತಿಗಳಿಗೆ ಪರೋಕ್ಷ ಸಹಕಾರ: ಖರ್ಗೆ