ಬೆಂಗಳೂರು: ಜೂನ್ 19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ರಾಜ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಮಾಡುವುದಕ್ಕೂ ಮುಂಚಿತವಾಗಿ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು.
ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು, ಜೆಡಿಎಸ್ ಒಬ್ಬರನ್ನು ಹಾಗೂ ಕಾಂಗ್ರೆಸ್ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್ ಖರ್ಗೆ ರಾಜ್ಯ ನಾಯಕರ ಜೊತೆ ತೆರಳಿ ವಿಧಾನಸಭೆ ಕಾರ್ಯದರ್ಶಿ ಹಾಗೂ ರಾಜ್ಯಸಭೆ ಚುನಾವಣಾಧಿಕಾರಿ ಎಂ.ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಮಾಜಿ ಸಿಎಂ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹಮದ್ ಸೇರಿದಂತೆ ಹಲವು ನಾಯಕರು ಆಗಮಿಸಿದ್ದರು.
ಮಲ್ಲಿಕಾರ್ಜುನ್ ಖರ್ಗೆ 4 ಸೆಟ್ ನಾಮಪತ್ರಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದರು. ಪ್ರತಿ ಸೆಟ್ ಸಲ್ಲಿಕೆ ಸಂದರ್ಭದಲ್ಲಿ ಕಾಂಗ್ರೆಸ್ನ ನಾಲ್ವರು ನಾಯಕರು ಜೊತೆಗಿದ್ದರು. ಪ್ರತಿ ನಾಮಪತ್ರಕ್ಕೆ ತಲಾ ಹತ್ತು ಮಂದಿ ಸೂಚಕರು ಸಹಿ ಮಾಡಿದ್ದು, ಒಟ್ಟು 40 ಸೂಚಕರ ಸಹಿ ಒಳಗೊಂಡ ನಾಲ್ಕು ಸೆಟ್ ನಾಮಪತ್ರಗಳನ್ನು ಮಲ್ಲಿಕಾರ್ಜುನ್ ಖರ್ಗೆ ಚುನಾವಣಾಧಿಕಾರಿಗೆ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ನಂತರ ವಿಧಾನಸೌಧದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮಲ್ಲಿಕಾರ್ಜುನ್ ಖರ್ಗೆ ರಾಜ್ಯಸಭೆ ಅಭ್ಯರ್ಥಿಗಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಹಲವು ಹಿರಿಯ ನಾಯಕರು ಸೂಚಕರಾಗಿ ಸಹಿ ಹಾಕಿದ್ದೇವೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿರ್ಧಾರವಿದು. ಪಕ್ಷಕ್ಕಾಗಿ ಸಲ್ಲಿಸಿರುವ ಸೇವೆ ಮನಗಂಡು ಆಯ್ಕೆ ಮಾಡಲಾಗಿದೆ. ಮೋದಿ ಸರ್ಕಾರದ ವೈಫಲ್ಯವನ್ನು ಮಲ್ಲಿಕಾರ್ಜುನ್ ಖರ್ಗೆ ಬಯಲಿಗೆಳೆದಿದ್ದರು. ಬಿಜೆಪಿಯವರು ಸೇರಿ ಅವರನ್ನ ಸೋಲಿಸಿದ್ದರು. ಲೋಕಸಭೆಯಲ್ಲಿ ಧ್ವನಿ ಎತ್ತಿದ್ದಕ್ಕಾಗಿ ಸೋಲಿಸಿದ್ದರು. 11 ಚುನಾವಣೆಗಳಲ್ಲಿ ಸೋಲು ಕಾಣದೇ ಅವರು ಗೆದ್ದು ಬಂದಿದ್ದರು. ಪಕ್ಷಕ್ಕೆ ಅವರ ಕೊಡುಗೆ ಅಪಾರ ಎಂದರು.