ಬೆಂಗಳೂರು: ಇವಿಎಂ ದುರ್ಬಳಕೆ ಬಗ್ಗೆ ಹಿಂದೆಯೂ ಅನುಮಾನ ಇತ್ತು, ಈಗಲು ಇದೆ. ಉಪಚುನಾವಣೆ ಸಂದರ್ಭದಲ್ಲಿ ಕೂಡ ಇದು ಮರುಕಳಿಸುವ ಸಂಶಯವಿದೆ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿಸ ಖರ್ಗೆ, ಕೇಂದ್ರ ಸರ್ಕಾರ ತಮ್ಮ ಅಧೀನದಲ್ಲಿರುವ ಎಲ್ಲಾ ತನಿಖಾ ಸಂಸ್ಥೆಗಳನ್ನು ಸೆಟ್ಟಿಂಗ್ ಮಾಡಿಕೊಳ್ಳುತ್ತಾರೆ. ಐಟಿ, ಇಡಿ, ಎಲೆಕ್ಷನ್ ಕಮಿಷನ್, ಸಿಬಿಐ ಎಲ್ಲವನ್ನೂ ಸೆಟ್ಟಿಂಗ್ ಮಾಡಿಕೊಳ್ಳುತ್ತಾರೆ. ಉಪಚುನಾವಣೆಯಲ್ಲೂ ಆಟವಾಡ್ತಾರೆ. ಇದರಿಂದಲೇ ಬ್ಯಾಲೆಟ್ ಪೇಪರ್ ನ ಮತ್ತೆ ಜಾರಿಗೆ ತನ್ನಿ ಎಂದು ಒತ್ತಾಯಿಸಿದ್ದೇವೆ. ಈ ಸಂಬಂಧ ರಾಷ್ಟ್ರಮಟ್ಟದ ಹೋರಾಟಕ್ಕೆ ಮುಂದಾಗಿದ್ದೇವೆ. ಇವಿಎಂ ಬಗ್ಗೆ ದೊಡ್ಡ ಆಂದೋಲನವಾಗಬೇಕು. ಬ್ಯಾಲೆಟ್ ಪೇಪರ್ ಮರುಜಾರಿಗೆ ತರಬೇಕು. ಹಾಗಾಗದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ವಿವರಿಸಿದರು.
ಇವಿಎಂ ದುರ್ಬಳಕೆ ಬಗ್ಗೆ ಈಗಲೂ ಅನುಮಾನವಿದೆ: ಖರ್ಗೆ ಆಯ್ದ ಕ್ಷೇತ್ರಗಳಲ್ಲಿ ಇವಿಎಂ ದುರ್ಬಳಕೆ :
ಇವಿಎಂ ಮೆಷಿನ್ ದುರುಪಯೋಗವಾಗುತ್ತಿದೆ. ಕೆಲವು ಆಯ್ದ ಕ್ಷೇತ್ರಗಳಲ್ಲಿ ದುರುಪಯೋಗ ಮಾಡ್ತಿದ್ದಾರೆ. ನಾನು ಸೋತಿದ್ದೇನೆ ಅಂತ ಆರೋಪ ಮಾಡ್ತಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆಯೂ ಇದೆ. 1952 ರಿಂದ 2019 ರ ವರೆಗೆ ಕಾಂಗ್ರೆಸ್ ಇದೆ. ಗುರುಮಿಠ್ಕಲ್ ನಲ್ಲಿ ಯಾವಾಗಲೂ ಕಾಂಗ್ರೆಸ್ ಗೆಲ್ಲುತ್ತಿತ್ತು. ಇಲ್ಲಿ ಕಾಂಗ್ರೆಸ್ ಗೆ ಹಲವರು ಬಂದು ನಿಂತು ಗೆದ್ದಿದ್ದಾರೆ. ಕಾಂಗ್ರೆಸ್ ಸಂಸದರಿಗೆ ಗುರುಮಿಠ್ಕಲ್ ಲೀಡ್ ಕೊಟ್ಟಿದೆ. ನಾನು ಶಾಸಕನಾಗಿದ್ದಾಗಲೂ ಅಲ್ಲಿ ಕಾಂಗ್ರೆಸ್ ಇದೆ. ಚಿತ್ತಾಪುರಕ್ಕೆ ನಾನು ಬದಲಾವಣೆ ಮಾಡಿದ ಮೇಲೂ ಅಲ್ಲಿ ಕಾಂಗ್ರೆಸ್ ಇತ್ತು. ಇಂತಹ ಕ್ಷೇತ್ರಗಳಲ್ಲಿ ಬಿಜೆಪಿ ಬರುತ್ತೆ ಅಂದ್ರೆ ಹೇಗೆ ಸಾಧ್ಯ? ವ್ಯವಸ್ಥಿತವಾಗಿ ಬಿಜೆಪಿ ಷಡ್ಯಂತ್ರ ಮಾಡುತ್ತಿದೆ. ವ್ಯಕ್ತಿಗತವಾಗಿ ಬಿಜೆಪಿ ಇಂತಹ ಕೆಲಸ ಮಾಡುತ್ತಿದೆ. ನನ್ನ ಕ್ಷೇತ್ರಕ್ಕೆ ಆರ್ಎಸ್ಎಸ್ ನವರು ಎರಡು ವರ್ಷ ಮೊದಲೇ ಬರುತ್ತಾರೆ. ಮೋದಿ ಕೂಡ ಹೆಚ್ಚಿನ ಒತ್ತು ನನ್ನ ಕ್ಷೇತ್ರಕ್ಕೆ ನೀಡ್ತಾರೆ. ಇದೆಲ್ಲವನ್ನೂ ಗಮನಿಸಿದಾಗ ಅನುಮಾನ ಬರುವುದು ಸಹಜ. ಇದು ಮುಂದೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದು ಖರ್ಗೆ ಅನುಮಾನ ವ್ಯಕ್ತಪಡಿಸಿದರು.
ಮೋದಿ ವಿರುದ್ಧ ಬೇಸರ :
ಮಹಾರಾಷ್ಟ್ರ ಚುನಾವಣೆ ಬಗ್ಗೆ ಚರ್ಚೆ ಮಾಡಲು ಹೈಕಮಾಂಡ್ ಭೇಟಿಗೆ ತೆರಳುತ್ತಿದ್ದೇನೆ. ದೆಹಲಿ ಪ್ರವಾಸ ಹಿನ್ನೆಲೆ ಬೆಳಗಾವಿಯ ಪ್ರತಿಭಟನೆಗೆ ಹೋಗಲು ಆಗಲಿಲ್ಲ. ಪ್ರಧಾನಿ ಮೋದಿಗೆ ಅಮೆರಿಕಾಗೆ ಹೋಗಿ ಭಾಷಣ ಮಾಡಲು ಸಮಯ ಇದೆ. ಇಲ್ಲಿ ನೆರೆ ಪ್ರದೇಶಗಳಿಗೆ ಭೇಟಿ ಮಾಡಲು ಅವರಿಗೆ ಸಮಯ ಇಲ್ಲ. ಜಿಡಿಪಿ ರೇಟ್ ಕಡಿಮೆ ಆಗ್ತಿದೆ. ಬೆಲೆ ಏರಿಕೆ ಆಗ್ತಿದೆ. ರಿಸರ್ವ್ ಬ್ಯಾಂಕ್ ನಿಂದ ಹಣ ತೆಗೆಯುತ್ತಾರೆ. ಎಲ್ಲವನ್ನು ಕೇಳೋಕೆ ಯಾರು ಇಲ್ಲ, ಕೇಳೋರನ್ನ ಸೈಡ್ ಲೈನ್ ಮಾಡ್ತಾರೆ. ವಿಷಯಗಳನ್ನ ಬದಲಿಸುವ ಕಾರ್ಯ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.