ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಖಾತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಪ್ರತಿನಿಧಿಸುವ ಮಲ್ಲೇಶ್ವರಂ ವಿಧಾನಸಭೆ ಕ್ಷೇತ್ರದಲ್ಲಿ ಡಿಜಿಟಲ್ ಮತ್ತು ಸ್ಮಾರ್ಟ್ ಕಲಿಕೆಗೆ ಒತ್ತು ನೀಡುವ ಹಿನ್ನೆಲೆ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಪ್ರೌಢಶಾಲೆಯ ಮಕ್ಕಳಿಗೆ ಒಂದು ಸಾವಿರ ಟ್ಯಾಬ್ ಮತ್ತು ಪ್ರಾಥಮಿಕ ಶಾಲೆಯ ಐವರು ಮಕ್ಕಳಿಗೆ ಒಂದರಂತೆ ಲ್ಯಾಪ್‌ಟಾಪ್ ನೀಡಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.
ಡಿಜಿಟಲ್ ಕಡೆ ಹೊರಳಿದ ಮಲ್ಲೇಶ್ವರಂ ಕ್ಷೇತ್ರದ ಸರ್ಕಾರಿ ಶಾಲೆಗಳು.. ನವೆಂಬರ್ ನಲ್ಲಿ ಸಾವಿರ ಟ್ಯಾಬ್ ವಿತರಣೆ : ಡಿಸಿಎಂ - ಮಲ್ಲೇಶ್ವರಂ ಕ್ಷೇತ್ರದಲ್ಲಿ ಟ್ಯಾಬ್ ವಿತರಣೆ
ಸ್ಮಾರ್ಟ್ ಕಲಿಕೆಗೆ ಒತ್ತು ನೀಡುವ ಉದ್ದೇಶದಿಂದ ಮಲ್ಲೇಶ್ವರಂ ಕ್ಷೇತ್ರದ ಎಲ್ಲಾ ಶಾಲೆಗಳಿಗೆ ಟ್ಯಾಬ್ ವಿತರಿಸಲು ಡಿಸಿಎಂ ಅಶ್ವತ್ಥ್ ನಾರಾಯಣ್ ಮುಂದಾಗಿದ್ದಾರೆ.
ಇದಕ್ಕೆ ಪೂರ್ವಭಾವಿಯಾಗಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಇಂದು 21 ಮಂದಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಟ್ಯಾಬ್‌ಗಳನ್ನು ವಿತರಿಸಿದರು. ಆ ಟ್ಯಾಬ್‌ಗಳಲ್ಲಿ ರಾಜ್ಯಮಟ್ಟದ ಪಠ್ಯ ಇರಲಿದ್ದು, ಅದರಲ್ಲಿ ಫೋಟೋಗಳು, ವಿಡಿಯೋಗಳು ಸೇರಿದಂತೆ ಆಧುನಿಕ ಕಾಲಘಟ್ಟದಲ್ಲಿ ಕಲಿಯಬೇಕಾದ ಎಲ್ಲ ರೀತಿಯ ಅಂಶಗಳನ್ನೂ ಮೊದಲೇ ಅಪ್ಲೋಡ್ ಮಾಡಲಾಗಿದೆ.
ಕೋವಿಡ್ ಕಾರಣದಿಂದ ಎಲ್ಲಡೆ ಡಿಜಿಟಲ್ ಕಲಿಕೆ ಅನಿವಾರ್ಯವಾಗಿದ್ದು, ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳು ಹಿಂದೆ ಬಿದ್ದಿವೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣದಿಂದಲೇ ವಂಚಿತವಾಗುವ ಅಪಾಯವೂ ಎದುರಾಗಿತ್ತು. ಇದನ್ನು ಮನಗಂಡ ಡಿಸಿಎಂ ಅವರು, ಕೂಡಲೇ ಮಲ್ಲೇಶ್ವರಂ ಕ್ಷೇತ್ರದಲ್ಲಿರುವ 7 ಪ್ರೌಢಶಾಲೆಗಳೂ ಸೇರಿದಂತೆ ಒಟ್ಟು 21 ಸರ್ಕಾರಿಗಳ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳ ಮಾಹಿತಿಯನ್ನು ತರಿಸಿಕೊಂಡು, ʼಡಾ.ಸಿ.ಎನ್.ಅಶ್ವತ್ಥನಾರಾಯಣ ಟ್ರಸ್ಟ್ʼ, ʼಆರ್.ವಿ.ಶಿಕ್ಷಣ ತರಬೇತಿ ಸಂಸ್ಥೆ ಮತ್ತು ಶಿಕ್ಷಣ ಫೌಂಡೇಷನ್ʼ ನೆರವಿನೊಂದಿಗೆ ಎಲ್ಲ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗಾಗಿ ಒಟ್ಟು 1,000 ಉತ್ಕೃಷ್ಟ ಗುಣಮಟ್ಟದ ಟ್ಯಾಬ್‌ಗಳನ್ನು ನೀಡಲು ಮುಂದಾದರು.
ಇದಕ್ಕೆ ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 21 ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನು ವಿತರಿಸಲಾಗಿದ್ದು, ಉಳಿದ ಟ್ಯಾಬ್‌ಗಳಿಗೆ ಕಂಟೆಂಟ್ ಲೋಡ್ ಮಾಡುವ ಕೆಲಸ ನಡೆಯುತ್ತಿದೆ. ಮುಂದಿನ ತಿಂಗಳು ಈ ಕೆಲಸ ಮುಗಿಯಲಿದ್ದು, ಕೂಡಲೇ ಮಕ್ಕಳಿಗೆ ವಿತರಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ನಮ್ಮ ಟ್ರಸ್ಟ್ ಜತೆ ಕೈಜೋಡಿಸಿ ಮಕ್ಕಳ ಕಲಿಕೆಗೆ ನೆರವಾದ ಆರ್.ವಿ. ಶಿಕ್ಷಣ ಸಂಸ್ಥೆಯನ್ನು ಮನಸಾರೆ ಮೆಚ್ಚಿಕೊಂಡ ಡಿಸಿಎಂ, ಇಂಥ ಸಾರ್ಥಕ ಕೆಲಸದಲ್ಲಿ ಖಾಸಗಿಯವರ ಸಹಭಾಗಿತ್ವ ಬಹಳ ಮುಖ್ಯ. ಇಂಥ ಉತ್ತಮ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಮತ್ತಿಕೆರೆ ಶಾಲೆಯಲ್ಲಿ ಜಾರಿ
ಶಾಲೆಗಳಲ್ಲಿ ಸ್ಮಾರ್ಟ್ ಮತ್ತು ಡಿಜಿಟಲ್ ಕಲಿಕೆಗೆ ಪ್ರೋತ್ಸಾಹ ನೀಡುವ ನಿಟ್ಟನಲ್ಲಿ ಈಗಾಗಲೇ ಮಲ್ಲೇಶ್ವರಂ ಕ್ಷೇತ್ರದ ಮತ್ತಿಕೆರೆಯ ಶಾಲೆಯಲ್ಲಿ ಸ್ಮಾರ್ಟ್ ಕಲಿಕೆ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ನಂತರ ಹಂತ ಹಂತವಾಗಿ ಇತರೆ ಶಾಲೆಗಳಲ್ಲೂ ಅನುಷ್ಠಾನಕ್ಕೆ ತರಲಾಗುತ್ತಿದೆ. ಶೇ.100ರಷ್ಟು ಡಿಜಿಟಲ್ ಕಲಿಕೆಗೆ ಶಿಕ್ಷಣವನ್ನು ಬದಲಿಸುವ ಉದ್ದೇಶದಿಂದ ಪ್ರೌಢಶಾಲೆ ಮಕ್ಕಳಿಗೆ ಟ್ಯಾಬ್ ಮತ್ತು ಪ್ರಾಥಮಿಕ ಶಾಲೆ ಮಕ್ಕಳಿಗೆ ಐವರಿಗೆ ಒಂದರಂತೆ ಲ್ಯಾಪ್‌ಟಾಪ್ ಕೊಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.
ಶಿಕ್ಷಕರಿಗೂ ತರಬೇತಿ
ಡಿಜಿಟಲ್ ಮತ್ತು ಸ್ಮಾರ್ಟ್ ಶಿಕ್ಷಣಕ್ಕೆ ಶಿಕ್ಷಕರೂ ಹೊಂದಿಕೊಳ್ಳುವಂತೆ ಮಾಡಲು ಅವರಿಗೂ ಕೂಡ ಸೂಕ್ತ ತರಬೇತಿ ನೀಡಲಾಗುತ್ತಿದೆ. ಮಕ್ಕಳಿಂದ ಹೋಮ್ ವರ್ಕ್ ಮಾಡಿಸುವುದು, ಟೆಸ್ಟ್, ಪರೀಕ್ಷೆ ನಡೆಸುವುದು, ಮಕ್ಕಳ ಓದು ಸೇರಿ ಎಲ್ಲ ಅಂಶಗಳನ್ನು ಸೂಕ್ತವಾದ ರೀತಿಯಲ್ಲಿ ಟ್ರ್ಯಾಕ್ ಮಾಡಲು ಅವರನ್ನು ಸಜ್ಜುಗೊಳಿಸಲಾಗುತ್ತಿದೆ. ಇದರ ಜತೆಗೆ, ಶಾಲೆಗಳಲ್ಲಿ ಕಟ್ಟಡ, ನೀರು, ಶೌಚಾಲಯ ಇನ್ನಿತರೆ ಯಾವುದೇ ಸಮಸ್ಯೆಗಳಿದ್ದರೆ ಅವುಗಳನ್ನು ಸರಿ ಪಡಿಸುವ ಕೆಲಸವನ್ನು ಕೂಡ ಮಾಡಲಾಗುತ್ತಿದೆ ಎಂದು ಹೇಳಿದರು.