ಬೆಂಗಳೂರು :ಭ್ರಮರಾಂಬ ಸಮೇತ ಕಾಡುಮಲ್ಲಿಕಾರ್ಜುನ ದೇವಾಲಯ ಸನ್ನಿಧಿಯಲ್ಲಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಜಿ ಸಚಿವ, ಶಾಸಕ ಮುನಿರತ್ನ, ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, ಕಾಂಗ್ರೆಸ್ ಪಕ್ಷದ ಮುಖಂಡ ಅನೂಪ್ ಅಯ್ಯಂಗಾರ್ ಶನಿವಾರ ಉದ್ಘಾಟಿಸಿದರು. ನಂತರ ಸಂಪಿಗೆ ರಸ್ತೆಯ ಗತ ವೈಭವ ಮರುಕಳಿಸಲು ಸಂಪಿಗೆ ರಸ್ತೆಯಲ್ಲಿ 50ಕ್ಕೂ ಅಧಿಕ ಸಂಪಿಗೆ ಗಿಡಗಳನ್ನು ನೆಡಲಾಯಿತು.
ಕಡಲೆಕಾಯಿ ಪರಿಷೆಯಲ್ಲಿ 20 ಅಡಿ ಉದ್ದ, 20 ಅಡಿ ಅಗಲದ ನಂದಿ(ಬಸವಣ್ಣ)ನನ್ನು 800 ಕೆಜಿ ಕಡಲೆಕಾಯಿಯಿಂದ ಶೃಂಗರಿಸಲಾಗಿದೆ. ಈ ಸಂದರ್ಭದಲ್ಲಿ ಶಾಸಕ ಮುನಿರತ್ನ ಮಾತನಾಡಿ, ಹಿಂದೂ ಸಂಸ್ಕೃತಿ, ಸಂಪ್ರದಾಯ ಆಚಾರ ವಿಚಾರ ತಿಳಿಯಲು ಮತ್ತು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ತಿಳಿಸಲು ಕಡಲೆಕಾಯಿ ಪರಿಷೆ ಸಾಕ್ಷಿಯಾಗಿದೆ. ಮಲ್ಲೇಶ್ವರದಲ್ಲಿ ಹುಟ್ಟಿ ಬೆಳದಿರುವುದರಿಂದ ನಾನು ಇದನ್ನು ಸಂಸ್ಕೃತಿ, ಸಂಪ್ರದಾಯಗಳ ಮತ್ತು ಸ್ಪೂರ್ತಿದಾಯಕ ಕ್ಷೇತ್ರ ಎಂದು ಹೇಳಲು ಬಯಸುತ್ತೇನೆ. ಪರಿಷೆಯ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ಆಶೀರ್ವಾದ, ಕೃಪೆ ನಾಡಿನ ಜನರಿಗೆ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಸಮಿತಿಯ ಅಧ್ಯಕ್ಷ ಬಿ.ಕೆ ಶಿವರಾಂ ಮಾತನಾಡಿ, ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ರಾಜ್ಯಗಳಿಂದ ಆಗಮಿಸಿದ ರೈತರು 350 ಮಳಿಗೆಗಳನ್ನು ಹಾಕಿದ್ದಾರೆ. ಜನರು ಪರಿಷೆಯಲ್ಲಿ ಮಲ್ಲಿಕಾರ್ಜುನನ ದರ್ಶನ ಪಡೆದು, ಕಡಲೆಕಾಯಿ ಪರಿಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೂರು ದಿನಗಳ ಕಾಲ ಜರುಗುವ ಪರಿಷೆಯಲ್ಲಿ 8 ಲಕ್ಷ ಜನರು ಭಾಗವಹಿಸುವ ಸಾಧ್ಯತೆ ಇದೆ. ಇಲ್ಲಿಗೆ ಆಗಮಿಸುವ ಭಕ್ತರಿಗೆ ಸೂಕ್ತ ನೀರಿನ ಮತ್ತು ಶೌಚಾಲಯದ ವ್ಯವಸ್ಥೆ ಮತ್ತು ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಡಲೆಕಾಯಿ ಪರಿಷೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬಸವನಗುಡಿಯಲ್ಲಿ ಜರುಗುವ ಕಡಲೆಕಾಯಿ ಪರಿಷೆಯಂತೆ ಮಲ್ಲೇಶ್ವರದಲ್ಲೂ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ. 10 ವಿವಿಧ ಬಗೆಯ ಕಡಲೆಕಾಯಿಯನ್ನು ರೈತರಿಂದ ನೇರ ಗ್ರಾಹಕರಿಗೆ ಮಾರಾಟ ಮಾಡುವ ಮತ್ತು ವಿವಿಧ ಕರಕುಶಲ ವಸ್ತುಗಳು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ನಗರದ ನಾಗರಿಕರು ಕಡಲೆಕಾಯಿ ಪರಿಷೆಯಲ್ಲಿ ಪಾಲ್ಕೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಚಂದ್ರಶೇಖರ್ ನಾಯ್ಡು, ಹಿಮಾಂಶು ಶಾಲೆಯ ಪ್ರಾಂಶುಪಾಲ ಚಂದ್ರಮೌಳಿ, ಅರ್ಚಕರಾದ ಗಂಗಾಧರ್ ದೀಕ್ಷಿತ್, ಶಶಿಧರ್ ಮತ್ತಿತತರು ಉಪಸ್ಥಿತರಿದ್ದರು.
ಇದನ್ನೂ ಓದಿ :ಬಸವನಗುಡಿ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಹರಿದು ಬರುತ್ತಿದೆ ಜನಸಾಗರ