ಬೆಂಗಳೂರು: ನಗರದ ಮಲ್ಲತ್ತಹಳ್ಳಿ ಕೆರೆಯಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಾಣ ಮಾಡಿಲ್ಲ. ಧಾರ್ಮಿಕ ಆಚರಣೆಗೆ ಬಳಕೆ ಮಾಡುವ ಗಣೇಶ ಮತ್ತು ದುರ್ಗಾ ಮೂರ್ತಿಗಳ ವಿಲೇವಾರಿಗಾಗಿ ಕೆರೆಯಿಂದ 52 ಮೀಟರ್ ದೂರದಲ್ಲಿ ಕಲ್ಯಾಣಿ ನಿರ್ಮಿಸಲಾಗುತ್ತಿದ್ದು, ಯಾವುದೇ ರೀತಿಯಲ್ಲಿಯೂ ಕೆರೆ ಒತ್ತುವರಿಯಾಗಿಲ್ಲ ಎಂದು ಹೈಕೋರ್ಟ್ಗೆ ಬಿಬಿಎಂಪಿ ಪ್ರಮಾಣ ಪತ್ರ ಸಲ್ಲಿಸಿದೆ. ಮಲ್ಲತ್ತಹಳ್ಳಿ ಕೆರೆಯಲ್ಲಿ ಶಿವನ ಪ್ರತಿಮೆ ಮತ್ತು ಬಯಲು ರಂಗ ಮಂದಿರ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ ಎಂದು ಆರೋಪಿಸಿ ವಕೀಲರಾದ ಗೀತಾ ಮಿಶ್ರಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ಟಿ.ವೆಂಕಟೇಶ ನಾಯಕ್ ಅವರಿದ್ದ ಪೀಠಕ್ಕೆ ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಪ್ರಮಾಣ ಪತ್ರದಲ್ಲಿ ಏನಿದೆ?ರಾಜ್ಯ ಸರ್ಕಾರದ ನಿರ್ದೇಶನದಂತೆ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿ ಕೆರೆಯಲ್ಲಿ ಕಲ್ಯಾಣಿಯಲ್ಲಿಯೇ ಬಯಲು ರಂಗ ಮಂದಿರ ಮಾದರಿಯಲ್ಲಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ಇದಕ್ಕಾಗಿ ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರ(ಕೆಟಿಸಿಡಿಎ)ದಿಂದ ಒಪ್ಪಿಗೆ ನೀಡಲಾಗಿದೆ. ಕಲ್ಯಾಣಿ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ.
ಕೆರೆ ಆವರಣದಿಂದ 52 ಮೀಟರ್ ದೂರದಲ್ಲಿ ಕಲ್ಯಾಣ ನಿರ್ಮಾಣ ಮಾಡಿಕೊಳ್ಳಲಾಗುತ್ತಿದೆ. ಇದು ಕೆರೆಯನ್ನು ಒತ್ತುವರಿ ಮಾಡಿರುವ ಆರೋಪವೇ ಬರುವುದಿಲ್ಲ. ಧಾರ್ಮಿಕ ಚಟುವಟಿಕೆಗಳಾದ ಗಣೇಶ ಮತ್ತು ದುರ್ಗಾ ಪ್ರತಿಮೆಗಳ ವಿಲೇವಾರಿಯಿಂದ ಕರೆ ನೀರಿನಲ್ಲಿ ಆಗಬಹುದಾದ ಮಾಲಿನ್ಯವನ್ನು ತಡೆಯುವ ಉದ್ದೇಶಕ್ಕಾಗಿ ಕಲ್ಯಾಣಿ ನಿರ್ಮಾಣ ಮಾಡಲಾಗುತ್ತಿದೆ. ಕಲ್ಯಾಣಿಯಲ್ಲಿರುವ ನೀರು ಕೆರೆ ನೀರಿನೊಂದಿಗೆ ಮಿಶ್ರಣವಾಗದೆ ಸ್ವಚ್ಛತೆ ಕಾಪಾಡುವ ಉದ್ದೇಶವನ್ನು ಹೊಂದಲಾಗಿದೆ. ಅಲ್ಲದೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡುವ ಕಲ್ಯಾಣಿಯ ನೀರನ್ನು ಚರಂಡಿ ಮೂಲಕ ಹೊರ ಕಳುಹಿಸಲಾಗುವುದು. ಆದರೆ, ಕೆರೆಗೆ ಮಿಶ್ರಣ ಮಾಡುವುದಕ್ಕೆ ಅವಕಾಶ ಇರುವುದಿಲ್ಲ.