ಕರ್ನಾಟಕ

karnataka

ETV Bharat / state

ಮಾಲ್ ಆಫ್ ಏಷ್ಯಾ ಮುಂದೆ ಸಂಚಾರ ನಿಯಂತ್ರಣಕ್ಕೆ ಕ್ರಮ : ಹೈಕೋರ್ಟ್​ಗೆ ಮಾಹಿತಿ - high court

ಮಾಲ್ ಆಫ್ ಏಷ್ಯಾದಲ್ಲಿ ವಾಹನ ನಿಲುಗಡೆ ಕುರಿತಾದ ಕ್ರಮಗಳ ಬಗ್ಗೆ ವಿವರವಾದ ವರದಿ ಸಲ್ಲಿಸಲು ಹೈಕೋರ್ಟ್​ ಸೂಚಿಸಿದೆ.

mall-of-asia-informed-to-high-court-about-action-to-control-traffic
ಮಾಲ್ ಆಫ್ ಏಷ್ಯಾ ಮುಂದೆ ಸಂಚಾರ ನಿಯಂತ್ರಣಕ್ಕೆ ಕ್ರಮ : ಹೈಕೋರ್ಟ್​ಗೆ ಮಾಹಿತಿ

By ETV Bharat Karnataka Team

Published : Jan 6, 2024, 9:57 AM IST

ಬೆಂಗಳೂರು :ಯಲಹಂಕ ಬಳಿಯ ಮಾಲ್ ಆಫ್ ಏಷ್ಯಾದಲ್ಲಿ ವಾಹನ ನಿಲುಗಡೆ ಕುರಿತಂತೆ ಎದುರಾಗಿದ್ದ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಹೈಕೋರ್ಟ್​​ಗೆ ಶುಕ್ರವಾರ ಮಾಹಿತಿ ನೀಡಲಾಗಿದೆ.

ಡಿಸೆಂಬರ್​ 31 ರಿಂದ ಜನವರಿ 15ರ ವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಧಿಂಸಿ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ, ಸ್ಪಾರ್ಕಲ್ ಒನ್ ಮಾಲ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ (ಮಾಲ್ ಆಫ್ ಏಷ್ಯಾ) ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿತ್ತು. ಇದನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದ್ವಿಚಕ್ರ ವಾಹನಗಳ ಪ್ರವೇಶ ಶುಲ್ಕ ಕಡಿತಗೊಳಿಸಲು ಸೂಚಿಸಲಾಗಿದೆ. ಕ್ಯಾಬ್, ಆಟೋಗಳ ಪಿಕಪ್, ಡ್ರಾಪ್ ಪಾಯಿಂಟ್ ಬದಲಾವಣೆ ಮಾಡಲಾಗಿದೆ. ಮಾಲ್‌ನ ಉದ್ಯೋಗಿಗಳ ವಾಹನ ಪಾರ್ಕಿಂಗ್‌ಗೆ ರಿಯಾಯಿತಿ ಪಾಸ್ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಭದ್ರತಾ ಚೆಕ್ಕಿಂಗ್ ಪಾಯಿಂಟ್ ಬದಲಾವಣೆ ಮಾಡಿ, ಪ್ರೀಪೇಯ್ಡ್ ಆಟೋ ನಿಲ್ದಾಣ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಆ ಪರಿಹಾರ ಕ್ರಮಗಳ ಜಾರಿ ಬಗ್ಗೆ ಜನವರಿ 30 ಕ್ಕೆ ವಿವರವಾದ ವರದಿ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿದೆ. ಅಲ್ಲದೆ, ಅಲ್ಲಿಯವರೆಗೆ ಮಾಲ್ ಆಫ್ ಏಷ್ಯಾ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ನಗರ ಪೊಲೀಸ್ ಆಯುಕ್ತರಿಗೆ ಈ ಹಿಂದೆ ನೀಡಿದ್ದ ನಿರ್ದೇಶನ ಮುಂದುವರೆಯಲಿದೆ ಎಂದು ಪೀಠ ತಿಳಿಸಿದೆ.

ಕಳೆದ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ನ್ಯಾಯಾಲಯದ ಸೂಚನೆಯಂತೆ ಮಾಲ್ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆದಿದೆ. ಮಾಲ್ ಪ್ರತಿನಿಧಿಗಳು ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ನಡೆಸಿದ್ದಾರೆ. ಪೊಲೀಸ್ ಆಯುಕ್ತರು ಮಾಲ್‌ಗೆ ಭೇಟಿ ನೀಡಿ, ಶಬ್ದ ಮಾಲಿನ್ಯ, ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ವಿವರಿಸಿದ್ದರು.

ಇದನ್ನೂ ಓದಿ:ಖಾಸಗಿ ಬಸ್‌ಗಳಿಗೂ 'ಶಕ್ತಿ ಯೋಜನೆ' ವಿಸ್ತರಣೆ ಕೋರಿ ಅರ್ಜಿ: ಹೈಕೋರ್ಟ್ ಹೇಳಿದ್ದೇನು?

ABOUT THE AUTHOR

...view details