ಬೆಂಗಳೂರು: ಮಂಡ್ಯದ ಮಳವಳ್ಳಿಯಲ್ಲಿ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಿಎಂ ಬೊಮ್ಮಾಯಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಟ್ಯೂಷನ್‌ಗೆ ಹೋದ ಬಾಲಕಿ ಅತ್ಯಾಚಾರಮಾಡಿ, ನಂತರ ಕೊಲೆ ಮಾಡಿದ ಘಟನೆ ಇಡೀ ನಾಗರೀಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ನಿರ್ಭಯ ಪ್ರಕರಣದ ನಂತರ ದೇಶದಲ್ಲಿ ಬಲವಾದ ಕಾನೂನು ಬಂದ ಮೇಲೇನೂ ಇಂತಹ ನೀಚ ಮಾನಸಿಕತೆಯ ಜನರಿಗೆ ಭಯ ಇಲ್ಲದಿರುರುವುದು ಈ ಪ್ರಕರಣದಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಪತ್ರದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಏನೂ ಅರಿಯದ ಪುಟ್ಟ ಬಾಲಕಿಯನ್ನು ಪುಸಲಾಯಿಸಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಕ್ಕೆ ಕರೆದೊಯ್ದು ಆತ್ಯಾಚಾರ ಮಾಡಿ, ಕತ್ತು ಹಿಸುಕಿ ಕೊಂದಿರುವುದು ಈಗಾಗಲೇ ಸಾಬೀತಾಗಿರುವುದರಿಂದ ಈ ಕೇಸ್ ಅನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಯಾರೂ ಅತ್ಯಾಚಾರವೆಸಗುವ ನೀಚ ಧೈರ್ಯವನ್ನು ತೋರಿಸಬಾರದು. ದೇಶದ ಕಾನೂನಿನ ಬಗ್ಗೆ ಭಯ ಮೂಡಬೇಕು ಅಂತಹ ಕಠಿಣವಾದ ಶಿಕ್ಷೆಯಿಂದ ಮಾತ್ರ ಸಮಾಜಕ್ಕೆ ಈ ಸಂದೇಶ ಹೋಗಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.