ಬೆಂಗಳೂರು:ಫೋರ್ಟಿಸ್ ಆಸ್ಪತ್ರೆಯೂ ಇದೇ ಮೊದಲ ಬಾರಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಮ್ಯಾಕೋ ರೊಬೊಟಿಕ್ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಈ ತಂತ್ರಜ್ಞಾನದ ಮೂಲಕ ಕೇವಲ ಒಂದು ತಿಂಗಳಲ್ಲಿ 50ಕ್ಕೂ ಹೆಚ್ಚು ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಈ ಕುರಿತು ಬುಧವಾರ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ಮೂಳೆ ಮತ್ತು ಜಂಟಿ ಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ನಾರಾಯಣ ಹುಲ್ಸೆ, ಮ್ಯಾಕೋ ರೊಬೊಟಿಕ್ ಆರ್ಮ್ ಅಸಿಸ್ಟೆಡ್ ಟೆಕ್ನಾಲಜಿ ಬಳಸಿ ಬಹು ಅಸ್ವಸ್ಥತೆಯಿಂದ ಬಳಲುತ್ತಿದ್ದ 66 ವರ್ಷದ ಆಫ್ರಿಕನ್ ರೋಗಿಗೆ ಹೊಸ ಜೀವನ ನೀಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಆಫ್ರಿಕನ್ ರೋಗಿಯು ಕಳೆದ 15 ವರ್ಷಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಕಾಲ ಕ್ರಮೇಣ ಅವರ ಆರೋಗ್ಯ ಸ್ಥಿತಿ ಕ್ಷೀಣಿಸ ತೊಡಗಿತು. ಮೊಣಕಾಲು ನೋವಿನ ಜೊತೆಗೆ ಅಧಿಕ ರಕ್ತದೊತ್ತಡ, ಅಸ್ತಮಾ ಮತ್ತು ಜನ್ಮಜಾತ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ರೋಗಿಯು ಸಂಧಿವಾತದಿಂದಾಗಿ ಎರಡೂ ಮೊಣಕಾಲುಗಳು ಸಂಪೂರ್ಣವಾಗಿ ಹಾನಿಗೊಳಗಾದವು. ರೋಗಿಯು ಫೋರ್ಟಿಸ್ ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಎರಡೂ ಮೊಣಕಾಲುಗಳಿಗೆ ಪ್ರತ್ಯೇಕವಾಗಿ 3 ದಿನಗಳ ಅಂತರದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದೆವು ಎಂದು ತಿಳಿಸಿದರು.