ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ 2 ಸಾವಿರ ಬೆಡ್ ಸೇರಿ ರಾಜ್ಯದ ಹಲವೆಡೆ ಮೇಕ್‍ಶಿಫ್ಟ್ ಆಸ್ಪತ್ರೆ ನಿರ್ಮಾಣ: ಸಚಿವ ಸುಧಾಕರ್ - ಆಕ್ಸಿಜನ್​​ಗಾಗಿ ಕೇಂದ್ರಕ್ಕೆ ಮೊರೆ

ಕೊರೊನಾ 2ನೇ ಅಲೆಯಲ್ಲಿ ರೂಪಾಂತರಗೊಂಡ ವೈರಾಣು ಬಂದಿದ್ದು, ಹೊಸ ರೋಗದಂತಿದೆ. ರಾಜ್ಯದಲ್ಲಿ ಹೆಚ್ಚು ಜನರು ಸೋಂಕಿತರಾದರೂ ಸಾವಿನ ಪ್ರಮಾಣ 0.4%ರಷ್ಟಿದೆ. ರಾಜ್ಯ ಸರ್ಕಾರ ಇದಕ್ಕಾಗಿಯೇ ಬಿಗಿಯಾದ ಕ್ರಮ ವಹಿಸಿದೆ. ಇತ್ತ ರಾಜ್ಯದ ಹಲವೆಡೆ ಮೇಕ್​ಶಿಫ್ಟ್​ ಆಸ್ಪತ್ರೆಗೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸುಧಾಕರ್​ ತಿಳಿಸಿದ್ದಾರೆ.

Sudhakar
ಡಾ.ಕೆ.ಸುಧಾಕರ್

By

Published : Apr 24, 2021, 8:09 PM IST

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಐಸಿಯು ಹೊಂದಿರುವ ಮೇಕ್‍ಶಿಫ್ಟ್ ಆಸ್ಪತ್ರೆ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ 2 ಸಾವಿರ ಹಾಸಿಗೆಗಳ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಮೈಸೂರು, ಬೀದರ್, ಹುಬಳ್ಳಿ, ಬೆಳಗಾವಿ ಹಾಗೂ ಶಿವಮೊಗ್ಗದಲ್ಲಿ ಮಾಡ್ಯೂಲರ್ ಐಸಿಯು ಹೊಂದಿರುವ 200-250 ಮೇಕ್‍ಶಿಫ್ಟ್ ಆಸ್ಪತ್ರೆ ನಿರ್ಮಿಸಲು ತೀರ್ಮಾನಿಸಲಾಗಿದೆ. 15 ದಿನದೊಳಗೆ ಈ ಆಸ್ಪತ್ರೆಗಳು ನಿರ್ಮಾಣವಾಗಬೇಕಿದೆ ಎಂದಿದ್ದಾರೆ.

ಕೊರೊನಾ 2ನೇ ಅಲೆಯಲ್ಲಿ ರೂಪಾಂತರಗೊಂಡ ವೈರಾಣು ಬಂದಿದ್ದು, ಹೊಸ ರೋಗದಂತಿದೆ. ರಾಜ್ಯದಲ್ಲಿ ಹೆಚ್ಚು ಜನರು ಸೋಂಕಿತರಾದರೂ ಸಾವಿನ ಪ್ರಮಾಣ 0.4%ರಷ್ಟಿದೆ. ರಾಜ್ಯ ಸರ್ಕಾರ ಇದಕ್ಕಾಗಿಯೇ ಬಿಗಿಯಾದ ಕ್ರಮ ವಹಿಸಿದೆ. ಹೊಸ ಮಾರ್ಗಸೂಚಿಯು ಜನರು ಗುಂಪುಗೂಡುವುದನ್ನು, ಅನಗತ್ಯ ಓಡಾಟ ತಪ್ಪಿಸುತ್ತದೆ ಎಂದರು.

1,414 ಟನ್​ ಆಕ್ಸಿಜನ್​​ಗಾಗಿ ಕೇಂದ್ರದ ಮೊರೆ

ಕೋವಿಡ್ ಲಸಿಕೆ ಬೇಗ ಬಂದಿದ್ದು, ಲಸಿಕೆ ಪಡೆಯುವುದರಲ್ಲಿ ಮುಂಚೂಣಿಯಲ್ಲಿರಬೇಕು. ವೈರಾಣು ರೂಪಾಂತರವಾದಂತೆ ಸೋಂಕು ಹೆಚ್ಚಾಗಬಹುದು. ವೈದ್ಯಕೀಯ ಜಗತ್ತಿಗೆ ಇದು ಸವಾಲಾಗಿ ಪರಿಣಮಿಸಿದೆ. ಮೊದಲ ಅಲೆಯಲ್ಲಿ ಯಾರಿಗೂ ಇಷ್ಟು ಆಕ್ಸಿಜನ್ ಅಗತ್ಯವಿರಲಿಲ್ಲ. ಆದರೆ ಈಗ ಅನೇಕರು ಆಕ್ಸಿಜನ್ ಬೇಕೆಂದು ಹೇಳುತ್ತಿದ್ದಾರೆ.

ಕಳೆದ ವರ್ಷ ಪೀಕ್ ಇದ್ದಾಗಲೂ 300-350 ಟನ್ ಆಕ್ಸಿಜನ್ ಪೂರೈಸಲಾಗಿತ್ತು. ಈ ಹಂತದಲ್ಲಿ 500 ಟನ್ ಬಳಕೆಯಾಗುತ್ತಿದೆ. ಇದು ತೀವ್ರವಾದರೆ ಆಕ್ಸಿಜನ್ ಬೇಡಿಕೆ ಹೆಚ್ಚಾಗಬಹುದು. ಅದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 1,414 ಟನ್​ನಷ್ಟು ಆಕ್ಸಿಜನ್ ಮೇ ತಿಂಗಳಿನಲ್ಲಿ ಪ್ರತಿ ದಿನ ಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಕೋರಿದ್ದಾರೆ ಎಂದು ಮಾಹಿತಿ ನೀಡಿದರು.

ಶೇ. 82ರಷ್ಟು ಮಂದಿ ಸೋಂಕಿತರು ಗುಣಮುಖ

ರಾಜ್ಯದಲ್ಲಿ ಈವರೆಗೆ ಶೇ. 82.08ರಷ್ಟು ಮಂದಿ ಕೋವಿಡ್​​ನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ 10,46,554 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ. ಇಂತಹ ಸಕಾರಾತ್ಮಕ ಅಂಶಗಳ ಕಡೆಗೂ ನಾವು ಗಮನಹರಿಸಬೇಕು. ಕೇವಲ ಆತಂಕಗೊಂಡು ಕಡಿಮೆ ಲಕ್ಷಣ ಇರುವಾಗಲೂ ಆಸ್ಪತೆಗೆ ದಾಖಲಾದರೆ ತೀವ್ರ ಸೋಂಕಿನಿಂದ ಬಳಲುತ್ತಿರುವವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇನ್ನು ಖಾಸಗಿ ಆಸ್ಪತ್ರೆಗಳು, ವೈದ್ಯರು ಕಡಿಮೆ ಲಕ್ಷಣ ಇರುವವರನ್ನು ದಾಖಲಿಸಿಕೊಳ್ಳಬಾರದು. ಈ ರೀತಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವ ಡಾ. ಕೆ.‌ಸುಧಾಕರ್ ಎಚ್ಚರಿಕೆ ನೀಡಿದರು.

ABOUT THE AUTHOR

...view details