ಬೆಂಗಳೂರು: ಮಹಾನಗರದ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಆದರೆ ಕೇವಲ ಪ್ರಧಾನಿ ನರೇಂದ್ರ ಮೋದಿಗಾಗಿ ರಸ್ತೆಗಳನ್ನು ಚೆನ್ನಾಗಿ ಮಾಡುವುದಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಂದು ಹೇಳಿದರು.
ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿಂದು ಮಾಧ್ಯಮರೊಂದಿಗೆ ಮಾತನಾಡಿದ ಅವರು, ನಾಳೆ ಮೋದಿ ಆಗಮನ ಹಿನ್ನೆಲೆ ರಸ್ತೆ ಡಾಂಬರೀಕರಣ ಆಗುತ್ತಿದೆ. ಮೋದಿ ಬಂದು ಹೋದ ಮೇಲೆ ಅವು ಕಿತ್ತು ಹೋಗುತ್ತವೆ. ಹಿಂದೆ ಮೋದಿ ಬರುವಾಗ ರಸ್ತೆಗೆ ಡಾಂಬರ್ ಹಾಕಿದ್ರು. ಅವರು ಹೋಗಿ ಒಂದು ವಾರದಲ್ಲಿ ಕಿತ್ತು ಹೋಗಿದ್ದವು. ಪಿಎಂ ಬರ್ತಾರೆ ಅಂತ ಮಾಡುತ್ತಿದ್ದಾರೆ. ನಾನು ಬೇಡ ಎನ್ನಲ್ಲ, ಆದರೆ ಕಳಪೆ ಕೆಲಸ ಮಾಡಿ, ಮತ್ತೆ ಕಿತ್ತು ಹೋದ್ರೆ ಏನು ಮಾಡೋಣ. ಗುಣಮಟ್ಟದ ಕೆಲಸ ಮಾಡಲ್ಲ ಎಂದರು.
ಇವರ ಯೋಗ್ಯತೆಗೆ ಬೆಂಗಳೂರು ಹಾಗೂ ಅನೇಕ ನಗರಗಳಲ್ಲಿ ಗುಂಡಿ ಮುಚ್ಚಲು ಆಗಿಲ್ಲ. ಕೋರ್ಟ್ನವರು ಛೀಮಾರಿ ಹಾಕಿದ್ದಾರೆ. ಮೋದಿ ಆಗಮನ ಹಿನ್ನೆಲೆ ಕನಕದಾಸ, ವಾಲ್ಮೀಕಿ, ಕೆಂಪೇಗೌಡರ ಪ್ರತಿಮೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದೆಲ್ಲವೂ ಗಿಮಿಕ್. ವಾಲ್ಮೀಕಿ ಪ್ರತಿಮೆ ನಮ್ಮ ಸರ್ಕಾರ ಮಾಡಿದ್ದು. ಹೂವಿನ ಹಾರ ಹಾಕಲು ಬರುತ್ತಿದ್ದಾರೆ. ವಾಲ್ಮೀಕಿ, ಕನಕದಾಸರ ಪ್ರತಿಮೆ ಮಾಡಿದವರು ನಾವು. ಹೂವಿನ ಹಾರ ಹಾಕಿದಾಕ್ಷಣ ಕನಕದಾಸರ ಪರ ಇದ್ದಾರಾ ಇವರು. ಇವೆಲ್ಲವೂ ಪೊಲಿಟಿಕಲ್ ಗಿಮಿಕ್. ಕೆಂಪೇಗೌಡರ ಜಯಂತಿ ಮಾಡಿದವರು ಯಾರು..? ಕೆಂಪೇಗೌಡರ ಪ್ರಾಧಿಕಾರ ಮಾಡಿದವರು ಯಾರು? ಏರ್ ಪೋರ್ಟ್ ಗೆ ಕೆಂಪೇಗೌಡ ಏರ್ಪೋರ್ಟ್ ಅಂತ ಹೆಸರು ಇಟ್ಟವರು ಯಾರು..? ಇದೆಲ್ಲವೂ ಮಾಡಿದ್ದು ನಮ್ಮ ಸರ್ಕಾರ ಎಂದು ಸಿದ್ದರಾಮಯ್ಯ ತಿಳಿಸಿದರು.
ಪ್ರತಿಮೆ ಮಾಡಬೇಕು ಎಂದು ನಾವು ಆಗಲೇ ತೀರ್ಮಾನ ಮಾಡಿದ್ದೆವು. ಏರ್ ಪೋರ್ಟ್ಗೆ ಹೆಸರು ಇಟ್ಟ ಮೇಲೆ, ಪ್ರತಿಮೆ ಮಾಡಬೇಕು ಎಂದು ತೀರ್ಮಾನ ಮಾಡಿದ್ವಿ. 40 ಪರ್ಸೆಂಟ್ ಕಮಿಷನ್ ಬಗ್ಗೆ ಉತ್ತರ ಕೊಡಲಿ. ಅದರ ಬಗ್ಗೆ ಪತ್ರ ಸಹ ಬರೆದಿದ್ದೇನೆ. ಕೆಂಪಣ್ಣ ಹಾಗೂ ನಾನು ಪತ್ರ ಬರೆದಿದ್ದೇವೆ ಎಂದರು.