ಬೆಂಗಳೂರು: ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಶ್ವಕರ್ಮ ಸಮುದಾಯಕ್ಕೆ ಬಲ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದ್ದು, ಕುಲಕಸುಬು ಮಾಡಿಕೊಂಡು ಬರುತ್ತಿರುವ ವಿಶ್ವಕರ್ಮ ಸಮುದಾಯದ ಜನರು ಯೋಜನೆಯ ಲಾಭ ಪಡೆದು ಆರ್ಥಿಕವಾಗಿ ಸದೃಢರಾಗುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.
ನಗರದ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಭಾನುವಾರ ಆಯೋಜನೆ ಮಾಡಲಾಗಿದ್ದ ಪಿಎಂ ವಿಶ್ವಕರ್ಮ ಯೋಜನೆಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಪಿಎಂ ವಿಶ್ವಕರ್ಮ ಕಾರ್ಯಕ್ರಮ ದೇಶಾದ್ಯಂತ ನಡೆಯುತ್ತಿದೆ. ಮೋದಿಯವರು ಈ ವರ್ಷ ವಿಶ್ವಕರ್ಮ ಸಮುದಾಯವನ್ನ ಮೇಲೆತ್ತಲು ಯೋಜನೆ ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.
ನಮ್ಮ ಹಳ್ಳಿಗಳನ್ನು ಸ್ವಾವಲಂಬಿಯಾಗಿ ಮಾಡಿದ್ದು ವಿಶ್ವಕರ್ಮ ಸಮುದಾಯ. ಮರ, ಕಬ್ಬಿಣ, ಚಿನ್ನದ ಕೆಲಸ, ಬಟ್ಟೆ ಶುಚಿ ಮಾಡುವ ಕೆಲಸವನ್ನು ಈ ಸಮುದಾಯ ಮಾಡುತ್ತಿದೆ. ಹೀಗಾಗಿ ಈ ಕಸುಬುಗಳಿಗೆ ತಂತ್ರಜ್ಞಾನ ಲೇಪ ಕೊಡಬೇಕು ಅಂತ ಪ್ರಧಾನಿ ಮುಂದಾಗಿದ್ದಾರೆ. ಮರ, ಕಲ್ಲು, ಚಿನ್ನದ ಕೆಲಸವನ್ನು ಈ ಹಿಂದೆ ಬರೀ ಕೈಯಲ್ಲಿ ಮಾಡುತ್ತಿದ್ದರು. ಆದರೆ ಈಗ ಅದಕ್ಕೆ ಯಂತ್ರ ಬಂದಿದೆ. ಆದರೆ ಅದಕ್ಕೆ ಈ ಸಮುದಾಯದ ಜನರಲ್ಲಿ ದುಡ್ಡಿಲ್ಲ. ಬ್ಯಾಂಕ್ ಗಳಲ್ಲಿ ಲೋನ್ ವ್ಯವಸ್ಥೆ ಇದ್ದರೂ ಸರಿಯಾಗಿ ಸಿಗುತ್ತಾ ಇರಲಿಲ್ಲ. ದೊಡ್ಡವರಿಗೆ ಮಾತ್ರ ಲೋನ್ ಸಿಗುವ ಕೆಲಸ ಆಗುತ್ತಾ ಇತ್ತು. ಕರಾವಳಿ ಭಾಗದಲ್ಲಿ ಚೀಲ ಹಿಡಿದುಕೊಂಡು ತಿರುಗಾಡ್ತಾ ಇದ್ದರು. ಒಂದು ಸಾವಿರಕ್ಕಾಗಿ ದಿನವಿಡೀ ಆ ಭಾಗದ ಮಹಿಳೆಯರು ಕೆಲಸ ಮಾಡ್ತಾ ಇದ್ದರು. ನಿಮ್ಮ ಕಷ್ಟ ಪರಿಹಾರಕ್ಕೆ ಹಾಗೂ ಸಮುದಾಯ ಮೇಲೆತ್ತುವ ದೃಷ್ಟಿಯಿಂದ ಪ್ರಧಾನಿ ಈ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.
ಈಗ ಮರ, ಚಿನ್ನದ ಕೆಲಸ ಮಾಡುವವರು ಜಾತಿಗೆ ಸೀಮಿತವಾಗಿಲ್ಲ. 15 ದಿನಗಳ ಕಾಲ ಈ ಯೋಜನೆಯಡಿ ಟ್ರೈನಿಂಗ್ ನೀಡಲಾಗುತ್ತದೆ. ವಾರ್ಷಿಕ ಶೇ.5ರಂತೆ 1 ಲಕ್ಷದ ವರೆಗೆ ಸಾಲ ನೀಡುವ ವ್ಯವಸ್ಥೆ ಈಗ ಇದೆ. ನಂತರ ಹಂತ-ಹಂತವಾಗಿ 2 ಲಕ್ಷ ರೂ. ಕೊಡುವ ವ್ಯವಸ್ಥೆ ಇದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಹಣವನ್ನು ಹಾಕುವ ವ್ಯವಸ್ಥೆ ಇದೆ ಎಂದು ಸ್ಪಷ್ಟಪಡಿಸಿದರು.