ಬೆಂಗಳೂರು :ಎರಡು ದಿನಗಳ ದಸರಾ ರಜಾ ಗುಂಗಿನಲ್ಲಿರುವ ಬಹುತೇಕ ಸರ್ಕಾರಿ ಸಿಬ್ಬಂದಿ ಇಂದೂ ಕೂಡ ಕಚೇರಿಗಳಿಗೆ ಗೈರಾಗಿರುವುದು ಕಂಡು ಬಂತು. ವಿಧಾನಸೌಧದಲ್ಲಿ ಇಂದು ಬಹುತೇಕ ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳು ಗೈರಾಗಿದ್ದಾರೆ.
ದಸರಾ ಪ್ರಯುಕ್ತ ಕಳೆದ ವಾರ ಗುರುವಾರ ಹಾಗೂ ಶುಕ್ರವಾರ ಸರ್ಕಾರಿ ರಜೆ ಇತ್ತು. ಶನಿವಾರ ಒಂದು ದಿನ ರಜೆ ಇಲ್ಲದಿದ್ದರೂ ಬಹುತೇಕ ಸರ್ಕಾರಿ ನೌಕರರು ಕಚೇರಿಗೆ ಹಾಜರಾಗಿರಲಿಲ್ಲ. ಭಾನುವಾರ ರಜೆ ಇದ್ದ ಹಿನ್ನೆಲೆ ಶನಿವಾರವೂ ಸರ್ಕಾರಿ ನೌಕರರು ರಜೆ ಪಡೆದಿದ್ದರು. ಇದೀಗ ಮತ್ತೆ ಮಂಗಳವಾರ ಹಾಗೂ ಬುಧವಾರ ಸರ್ಕಾರಿ ರಜೆ ಇರುವುದರಿಂದ ಸೋಮವಾರವಾದ ಇಂದು ಬಹುತೇಕ ಸಿಬ್ಬಂದಿ ಕಚೇರಿಗೆ ಗೈರಾಗಿದ್ದರು.
ಮತ್ತೆ ಎರಡು ದಿನ ಸರ್ಕಾರಿ ರಜೆ :ನಾಳೆ ಈದ್ ಮಿಲಾದ್ ಪ್ರಯುಕ್ತ ಸರ್ಕಾರಿ ರಜೆ ಎಂದು ಘೋಷಿಸಲಾಗಿದೆ. ಈ ಸಂಬಂಧ ಶನಿವಾರ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ಬುಧವಾರ ವಾಲ್ಮೀಕಿ ಜಯಂತಿ ಪ್ರಯುಕ್ತ ರಜೆ ಇರಲಿದೆ. ಮಂಗಳವಾರ ಮತ್ತು ಬುಧವಾರ ಸತತ ಎರಡು ದಿನ ರಜೆ ಇರುವುದರಿಂದ, ರಜಾ ಮೂಡಿನಲ್ಲಿ ಇರುವ ಬಹುತೇಕ ಸರ್ಕಾರಿ ನೌಕರರು ಇಂದೂ ಕೂಡ ರಜೆ ಹಾಕಿದ್ದಾರೆ.
ದಸರಾ ಹಬ್ಬದ ಎರಡು ದಿನದ ರಜೆ ಹಾಗೂ ಈದ್ ಮಿಲಾದ್ ಹಾಗೂ ವಾಲ್ಮೀಕಿ ಜಯಂತಿ ಪ್ರಯುಕ್ತ ಮತ್ತೆ ಎರಡು ದಿನಗಳ ರಜೆ ಇರುವ ಹಿನ್ನೆಲೆ ಸೋಮವಾರವೂ ಬಹುತೇಕ ಸರ್ಕಾರಿ ನೌಕರರು ರಜೆ ಹಾಕಿದ್ದು, ಕಚೇರಿಗಳಿಗೆ ಗೈರಾಗಿದ್ದಾರೆ. ಸರಣಿ ರಜೆಗಳ ಹಿನ್ನೆಲೆ ವಿಧಾನಸೌಧ, ವಿಕಾಸಸೌಧ ಮತ್ತು ಎಂಎಸ್ ಕಟ್ಟಡದಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲದೇ ಬಿಕೋ ಎನ್ನುತ್ತಿರುವುದು ಕಂಡು ಬಂತು.
ಇದನ್ನೂ ಓದಿ:ರಾಯರ ದರ್ಶನಕ್ಕೆ ತೆರಳಿದ್ದ ಮೈಸೂರಿನ ರಾಘವೇಂದ್ರ ಅನುಮಾನಾಸ್ಪದ ರೀತಿ ಸಾವು