ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ನಡೆಸಲಿದೆ. ಇದರೊಂದಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿಯೂ ಮೇಜರ್ ಸರ್ಜರಿ ನಡೆಯಲಿದೆಯಾ? ಎಂಬ ಪ್ರಶ್ನೆ ಮೂಡಿದೆ. ಇದೀಗ, ರಾಜಕೀಯ ಪಕ್ಷಗಳನ್ನ ನೆಚ್ಚಿಕೊಂಡು ಎರಡು, ಮೂರು ವರ್ಷಗಳಿಂದ ಆಯಕಟ್ಟಿನ ಹುದ್ದೆಗಳಲ್ಲಿ ತಳವೂಳಿರುವ ಹಿರಿಯ ಮತ್ತು ಕಿರಿಯ ಅಧಿಕಾರಿಗಳ ಎತ್ತಂಗಡಿಗೆ ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅನೇಕ ಬಾರಿ ಕೆಲ ಅಧಿಕಾರಿಗಳು ಕಾಂಗ್ರೆಸ್ ನಾಯಕರನ್ನ ಎದುರು ಹಾಕಿಕೊಂಡಿದ್ದ ಪ್ರಸಂಗಗಳು ನಡೆದಿವೆ. ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಭಟನೆಗಿಳಿದಾಗ ಪೊಲೀಸ್ ಹಿರಿಯ ಅಧಿಕಾರಿಗಳ ವಿರುದ್ಧವೂ ಹಲವು ಬಾರಿ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದರು. 'ನೀನು ಯಾವ ಪಕ್ಷಕ್ಕಾಗಿ ಕೆಲಸ ಮಾಡ್ತಿಯಾ ಎಂದು ಗೊತ್ತಿದೆ' ಎನ್ನುವಷ್ಟರ ಮಟ್ಟಿಗೆ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಅಧಿಕಾರಿಗಳು ಸಹ ಸದ್ಯಕ್ಕೆ ಉನ್ನತ ಹುದ್ದೆಯಲ್ಲಿದ್ದು, ವರ್ಗಾವಣೆಯ ಸಾಧ್ಯತೆ ದಟ್ಟವಾಗಿದೆ.
ಉನ್ನತ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಗಳ ಜೊತೆಗೆ ಕೆಳ ಹಂತದ ಅಧಿಕಾರಿಗಳಿಗೂ ವರ್ಗಾವಣೆಯ ಬಿಸಿ ತಟ್ಟಲಿದೆ ಎನ್ನಲಾಗಿದೆ. ಕಳೆದ ಐದು ವರ್ಷಗಳಲ್ಲಿ ಇಲಾಖೆಯೊಳಗಿನ ಆಗು ಹೋಗುಗಳನ್ನ ಗಮನಿಸಿರುವ ಕಾಂಗ್ರೆಸ್, ಆಯಾ ಭಾಗಗಳ ಶಾಸಕರು, ಸಚಿವರ ಕೃಪಾ ಕಟಾಕ್ಷದಿಂದ ಆಯಕಟ್ಟಿನ ಸ್ಥಳಗಳಲ್ಲಿ ಅಧಿಕಾರದಲ್ಲಿರುವ ಇನ್ಸ್ಪೆಕ್ಟರ್, ಎಸಿಪಿ, ಡಿಸಿಪಿಗಳ ವರ್ಗಾವಣೆಗೆ ಎಲ್ಲ ರೀತಿಯ ಸಿದ್ಧತೆ ಆರಂಭಿಸಿದೆ. ಅಷ್ಟೇ ಅಲ್ಲದೆ, ಹೆಚ್ಚುವರಿ ಪೊಲೀಸ್ ಆಯುಕ್ತ, ಜಂಟಿ ಪೊಲೀಸ್ ಆಯುಕ್ತ, ನಗರ ಪೊಲೀಸ್ ಆಯುಕ್ತರ ವರ್ಗಾವಣೆಗೂ ಸಿದ್ಧತೆಗಳು ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ :ದೆಹಲಿಯತ್ತ ಸಿದ್ದರಾಮಯ್ಯ ಪ್ರಯಾಣ: ನಿಗದಿಯಾಗದ ಡಿ.ಕೆ.ಶಿವಕುಮಾರ್ ಪ್ರವಾಸ