ಕರ್ನಾಟಕ

karnataka

ETV Bharat / state

ಕ್ರಿಮಿನಲ್​ ಪ್ರಕರಣ: ಜನವರಿ 2022 ರಿಂದ ಈವರೆಗೆ ಹೈಕೋರ್ಟ್​ ನೀಡಿದ ಮಹತ್ವದ ಆದೇಶಗಳಿವು

ಕ್ರಿಮಿನಲ್​ ಪ್ರಕರಣಗಳಿಗೆ ಸಂಬಂಧಿಸಿದಂತೆ ಜನವರಿ 2022 ರಿಂದ ಈವರೆಗೆ ಹೈಕೋರ್ಟ್​ ನೀಡಿದ ಮಹತ್ವದ ಆದೇಶಗಳ ಮಾಹಿತಿ ಇಲ್ಲಿದೆ ನೋಡಿ.

high court
ಹೈಕೋರ್ಟ್​

By

Published : Dec 31, 2022, 6:49 AM IST

ಬೆಂಗಳೂರು: ಕ್ರಿಮಿನಲ್​ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಲ್ಲಿ ಹಲವು ಮಹತ್ವದ ಆದೇಶಗಳನ್ನು ನೀಡಿರುವ ಹೈಕೋರ್ಟ್, ಅನೇಕ ಪ್ರಕರಣಗಳಲ್ಲಿ ಮಾರ್ಗ ಸೂಚಿಗಳನ್ನು ರಚಿಸಿದೆ. ರೌಡಿಶೀಟರ್ ದಾಖಲಿಸುವುದು, ತನಿಖೆಗೆ ಕಾಲ ಮಿತಿ ನಿಗದಿಪಡಿಸುವುದು, ಕೈ ಕೊಳ ತೊಡಿಸುವ ಸಂಬಂಧ ಹಲವು ಮಹತ್ವದ ಆದೇಶಗಳು ಹೊರ ಬಂದಿವೆ.

ರೌಡಿ ಶೀಟರ್ ತೆರೆಯಲು ಮಾರ್ಗಸೂಚಿ: ವ್ಯಕ್ತಿಯೊಬ್ಬ ಅಪರಾಧ ಪ್ರಕರಣಗಳ ಆರೋಪದಿಂದ ಖುಲಾಸೆಯಾಗಿದ್ದರೂ ಆತನ ವಿರುದ್ಧ ರೌಡಿಶೀಟ್ ತೆರೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಜತೆಗೆ, ಗುಪ್ತಚರ ವರದಿ ಹಾಗೂ ನಿಖರ ಮಾಹಿತಿಯ ಆಧಾರದಲ್ಲಿ ರೌಡಿ ಪಟ್ಟಿಗೆ ವ್ಯಕ್ತಿಯನ್ನು ಸೇರಿಸಬಹುದು ಎಂದು ಆದೇಶ ನೀಡಿದೆ. ಈ ಸಂಬಂಧ ಪೊಲೀಸ್​ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿಗಳನ್ನು ರಚನೆ ಮಾಡಿದೆ.

ಅಪರಾಧ ಪ್ರಕರಣಗಳ ತನಿಖೆಗೆ ಡೆಡ್‌ಲೈನ್:ಅಪರಾಧ ಪ್ರಕರಣಗಳ ತನಿಖೆಗೆ ವಿಳಂಬ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್, ಕಾಲಮಿತಿ ನಿಗದಿ ಪಡಿಸಿದೆ. ಸಣ್ಣಪುಟ್ಟ ಅಪರಾಧ ಪ್ರಕರಣಗಳ ತನಿಖೆಗೆ 60 ದಿನ ಹಾಗೂ ಗಂಭೀರ ಮತ್ತು ಘೋರ ಅಪರಾಧ ಕೃತ್ಯಗಳ ತನಿಖೆಗೆ 90 ದಿನಗಳ ಕಾಲಮಿತಿ ನಿಗದಿಪಡಿಸಿದ್ದು, ಈ ಅವಧಿಯಲ್ಲಿಯೇ ತನಿಖೆ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿ ಆದೇಶಿಸಿದೆ.

ಪೋಕ್ಸೋ ಸಂತ್ರಸ್ತರು ಪ್ರಾಪ್ತರಾದಾಗ ಪಾಟೀ ಸವಾಲಿಗೊಳಪಡಿಸಬಹುದು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಸಂತ್ರಸ್ತರಾದವರು ಪ್ರಾಪ್ತರಾದ ಬಳಿಕ ತನಿಖೆಗೆ ಒಳಪಡಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ. ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಸಂತ್ರಸ್ತ ಮಗುವನ್ನು ಪದೇ ಪದೆ ಪಾಟೀ ಸವಾಲಿಗೆ ಒಳಪಡಿಸಬಾರದು ಎಂಬ ನಿಯಮವಿದೆ. ಆದರೆ, ಸಂತ್ರಸ್ತರಿಗೆ 18 ವರ್ಷ ತುಂಬಿ ಪ್ರಾಪ್ತರಾದಾಗ ಅವರನ್ನು ಮತ್ತೆ ಪಾಟೀ ಸವಾಲಿಗೆ ಒಳಪಡಿಸಬಹುದು ಎಂದು ತಿಳಿಸಿದೆ.

ಇದನ್ನೂ ಓದಿ:ಪೋಕ್ಸೋ ಕಾಯಿದೆಯನ್ನು ಯಾವುದೇ ವೈಯಕ್ತಿಕ ಕಾನೂನು ಅತಿಕ್ರಮಿಸುವುದಿಲ್ಲ: ಹೈಕೋರ್ಟ್

ಬಲವಾದ ಕಾರಣವಿಲ್ಲದೇ ಆರೋಪಿಗಳಿಗೆ ಕೈಕೊಳ ತೊಡಿಸುವಂತಿಲ್ಲ: ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗುವ ಎಲ್ಲ ಆರೋಪಿಗಳಿಗೂ ಕೈಕೊಳ (ಬೇಡಿ) ತೊಡಿಸಬಾರದು ಎಂದು ಹೈಕೋರ್ಟ್​ ಸೂಚನೆ ನೀಡಿದೆ. ಅತ್ಯಗತ್ಯ ಸಂದರ್ಭಗಳಲ್ಲಿ ಸಕಾರಣವಿದ್ದರೆ ಮಾತ್ರ ಕೈಕೋಳ ಹಾಕಲು ಅವಕಾಶವಿದೆ. ಅಂತಹ ಸಮಯದಲ್ಲಿ ಕೋಳ ತೊಡಿಸುವ ಪೊಲೀಸರು ಕಡ್ಡಾಯವಾಗಿ ಬಾಡಿವಾರ್ನ್​ ಕ್ಯಾಮರಾ ಧರಿಸಿರಬೇಕು ಎಂದು ಮಹತ್ವದ ಆದೇಶ ನೀಡಿದೆ. ಜತೆಗೆ, ಈ ಸಂಬಂಧ ತನಿಖಾಧಿಕಾರಿಗಳು ಕೈಗೊಳ್ಳಲು ಮಾರ್ಗಸೂಚಿಗಳನ್ನು ರಚನೆ ಮಾಡಿ ಆದೇಶಿಸಿದೆ.

ನಕಲಿ ಥೆರಪಿಸ್ಟ್‌ಗಳ ನಿಯಂತ್ರಣ ಮಾಡಿ:ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ತಲೆ ಎತ್ತಿರುವ ನಕಲಿ ಥೆರಪಿಸ್ಟ್‌ಗಳ (ಚಿಕಿತ್ಸಕರು) ನಿಯಂತ್ರಣ ಮಾಡುವಂತೆ ಹೈಕೋರ್ಟ್​ ಸರ್ಕಾರಕ್ಕೆ ಸೂಚನೆ ನೀಡಿತ್ತು. ಅರ್ಹತೆ ಇಲ್ಲದೆಯೂ ವ್ಯಕ್ತಿಯೊಬ್ಬರಿಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್​ ಪೇಜ್ ಮೂಲಕ ಮಾನಸಿಕ ಒತ್ತಡ ನಿವಾರಣೆಗೆ ಥೆರಪಿ ತರಗತಿ ನೀಡುವುದಾಗಿ ತಿಳಿಸಿ 3.15 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಹೈಕೋರ್ಟ್​ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಮೂಲಕ ವಂಚಕರಿಗೆ ಕಡಿವಾಣ ಹಾಕಲು ನಿರ್ದೇಶಿಸಿದೆ.

ಇದನ್ನೂ ಓದಿ:ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಥೆರಫಿ ಖಾತೆಗಳ ನಿಯಂತ್ರಣ ಹೇರಲು ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ

ಜಾಮೀನು ಶ್ಯೂರಿಟಿಗೆ ನಕಲಿ ದಾಖಲೆ ಸಲ್ಲಿಕೆ ಬಗ್ಗೆ ಮಾರ್ಗಸೂಚಿ ರಚನೆ: ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ನೀಡಲಾಗುವ ಜಾಮೀನಿಗೆ ಶ್ಯೂರಿಟಿ (ಭದ್ರತಾ ಖಾತ್ರಿ) ನೀಡುವವರ ಕುರಿತು ಡ್ಯಾಷ್​ಬೋರ್ಡ್ ರಚನೆ ಮಾಡುವಂತೆ ಸೂಚನೆ ನೀಡಿರುವ ಹೈಕೋರ್ಟ್, ಈ ಸಂಬಂಧ ಹಲವು ಮಾರ್ಗ ಸೂಚಿಗಳನ್ನು ರಚನೆ ಮಾಡಿದೆ. ಒಂದೇ ವ್ಯಕ್ತಿ ಹಲವರಿಗೆ ಶ್ಯೂರಿಟಿ ನೀಡುವ ಪ್ರಕರಣಗಳ ಕಡಿವಾಣಕ್ಕೆ ವಿಚಾರಣಾ ನ್ಯಾಯಾಲಯಗಳು ಅನುಸರಿಸಬೇಕಾದ ವಿಧಾನಗಳ ಹಲವು ನಿಯಮಗಳನ್ನು ಜಾರಿಗೆ ತರುವಂತೆ ಸೂಚಿಸಿದೆ.

ಇದನ್ನೂ ಓದಿ:ರಾಜಾಜಿನಗರ ಆಟದ ಮೈದಾನದ ಅಭಿವೃದ್ಧಿ ಕಾಮಗಾರಿ ಸ್ಥಗಿತ: ಸರ್ಕಾರಕ್ಕೆ ನೋಟಿಸ್​ ​

ಚಾಮರಾಜಪೇಟೆ ಈದ್ಗಾ ಮೈದಾನ ಆಟಕ್ಕಷ್ಟೇ ಸೀಮಿತ: ಬೆಂಗಳೂರು ನಗರದ ಚಾಮರಾಜಪೇಟೆ ಈದ್ಗಾ ಮೈದಾನವನ್ನು ಆಟದ ಮೈದಾನವಾಗಿಯಷ್ಟೇ ಬಳಸಿಕೊಳ್ಳಬೇಕು ಎಂದು ಹೈಕೋರ್ಟ್​ ಸರ್ಕಾರಕ್ಕೆ ಸೂಚನೆ ನೀಡಿದೆ. ಜತೆಗೆ, ಈ ಮೈದಾನದಲ್ಲಿ ರಂಜಾನ್ ಹಾಗೂ ಬಕ್ರೀದ್ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದೂ ಸೂಚನೆ ನೀಡಿದೆ.

ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ಇತರೆಡೆ ಪ್ರತಿಭಟನೆ ಇಲ್ಲ: ನಗರದಲ್ಲಿ ಪದೇ ಪದೆ ನಡೆಯುತ್ತಿರುವ ಪ್ರತಿಭಟನೆ, ಧರಣಿಗಳನ್ನು ತಡೆಯುವುದಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ಜತೆಗೆ, ಗಾಂಧಿನಗರದಲ್ಲಿರುವ ಸ್ವಾತಂತ್ರ್ಯ ಉದ್ಯಾನ (ಫ್ರೀಂ ಪಾರ್ಕ್) ಹೊರತುಪಡಿಸಿ ಬೇರಾವುದೇ ಸ್ಥಳಗಳಲ್ಲೂ ಮೆರವಣಿಗೆ, ಪ್ರತಿಭಟನೆ, ಬಹಿರಂಗ ಸಭೆ ನಡೆಸಲು ಯಾವುದೇ ರಾಜಕೀಯ ಪಕ್ಷ ಹಾಗೂ ಸಂಘಟನೆಗಳಿಗೆ ಅವಕಾಶ ಕಲ್ಪಿಸಬಾರದು ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು.

ABOUT THE AUTHOR

...view details