ಬೆಂಗಳೂರು: ಕೊರೊನಾ ಪರಿಸ್ಥಿತಿಯಿಂದಾಗಿ ದೇಶದಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿತ್ತು. 2020ರಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳೇನೂ ಕಡಿಮೆಯಾಗಿರಲಿಲ್ಲ. ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಕೆಲವೊಂದು ಘಟನೆಗಳು ದೇಶದಲ್ಲಿ ಮಾತ್ರವಲ್ಲದೆ, ವಿದೇಶದಲ್ಲೂ ಸುದ್ದಿಯಾದವು. ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ನಡೆದ ಕೆಲವೊಂದು ಪ್ರಮುಖ ಅಪರಾಧ ಪ್ರಕರಣಗಳು ಹೀಗಿವೆ.
ಡಿ.ಜೆ.ಹಳ್ಳಿ ಕೆ.ಜಿ.ಹಳ್ಳಿ ಗಲಭೆ ಪ್ರಕರಣ:ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ನವೀನ್ ವಿವಾದ್ಮಾತಕ ಪೋಸ್ಟ್ನಿಂದ ಹೊತ್ತಿಕೊಂಡ ಬೆಂಕಿ ಬೆಂಗಳೂರು ನಗರವನ್ನು ಅಕ್ಷರಶಃ ತಲ್ಲಣಗೊಳಿಸಿತ್ತು. ಆಗಸ್ಟ್ 11ರಂದು ಶಾಸಕರ ಮನೆ, ಡಿ.ಜೆ.ಹಳ್ಳಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗಳ ಮುಂದೆ ನೂರಾರು ಜನರು ಸೇರಿ ಕಲ್ಲು ತೂರಾಟ ನಡೆಸಿ ವಿಧ್ವಂಸಕ ಕೃತ್ಯವೆಸಗಿದ್ದರು. ಇದು ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಪ್ರಕರಣದ ಗಂಭೀರತೆ ಅರಿತ ಸರ್ಕಾರ ಸಿಸಿಬಿ ತನಿಖೆಗೆ ವಹಿಸಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ತಂಡವು ಮಾಜಿ ಮೇಯರ್ ಸಂಪತ್ ರಾಜ್, ಮಾಜಿ ಕಾರ್ಪೋರೇಟರ್ ಜಾಕೀರ್, ಎಸ್ಡಿಪಿಐ ಮುಖಂಡ ಮುಜಾಹಿದ್ ಪಾಷಾ ಸೇರಿದಂತೆ ಒಟ್ಟು 300ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದೆ. ಎನ್ಐಎ ಕೂಡ ಪ್ರಕರಣ ದಾಖಲಿಸಿಕೊಂಡು ಗಲಭೆ ನಡೆದ ಸ್ಥಳಗಳಲ್ಲಿ ಪರಿಶೀಲನೆ ಮಾಡಿ ಹಲವರನ್ನು ಬಂಧಿಸಿತ್ತು.
ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ನಂಟು ಪ್ರಕರಣ:ಕೇಂದ್ರದ ಮಾದಕ ವಸ್ತು ನಿಗ್ರಹ ದಳ (ಎನ್ಸಿಬಿ) ಡ್ರಗ್ಸ್ ಸರಬರಾಜು ಆರೋಪದಡಿ ಅನಿಕಾ, ಅನುಪ್, ರವೀಂದ್ರ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸುತ್ತಿದ್ದಂತೆ ಸ್ಯಾಂಡಲ್ವುಡ್ ಸ್ಟಾರ್ ನಟಿಯರು ಈ ದಂಧೆಯಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿತ್ತು. ಮಾಹಿತಿ ಆಧರಿಸಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ 20ಕ್ಕೂ ಹೆಚ್ಚು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವಾ, ಶಿವಪ್ರಕಾಶ್ ಚಿಪ್ಪಿ ಸೇರಿದಂತೆ ಪ್ರಮುಖರು ತಲೆಮರೆಸಿಕೊಂಡಿದ್ದಾರೆ.
ಪಾದರಾಯನಪುರ ದೊಂಬಿ ಪ್ರಕರಣ:ಕೊರೊನಾ ಮುಂಜಾಗ್ರತಾ ಕ್ರಮವಾಗಿ ಚಾಮರಾಜಪೇಟೆಯ ಪಾದರಾಯನಪುರ ವಾರ್ಡ್ನಲ್ಲಿ ಕಳೆದ ಏಪ್ರಿಲ್ 19ರಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಸೋಂಕಿತರನ್ನು ಕ್ವಾರಂಟೈನ್ಗೆ ಕರೆದೊಯ್ಯುವಾಗ ಗಲಭೆ ಎಬ್ಬಿಸಿದ 300ಕ್ಕೂ ಹೆಚ್ಚು ಸ್ಥಳೀಯರು, ಶಾಮಿಯಾನ, ಕುರ್ಚಿ, ಮೇಜುಗಳನ್ನು ಧ್ವಂಸಗೊಳಿಸಿದ್ದರು. ಈ ಸಂಬಂಧ 130ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಸರ್ಕಾರದ ಸೂಚನೆಯಂತೆ ಆರೋಪಿಗಳನ್ನು ರಾಮನಗರ ಕಾರಾಗೃಹಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಗುಂಪಿನಲ್ಲಿದ್ದ ಐವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಇದಾದ ಕೆಲವೇ ದಿನಗಳ ಅಂತರದಲ್ಲಿ ಪಾದರಾಯಪುರ ವಾರ್ಡ್ ಕಾರ್ಪೋರೇಟರ್ ಆಗಿದ್ದ ಇಮ್ರಾನ್ ಪಾಷಾ ಕೋವಿಡ್ ನಿಯಮಾವಳಿ ಪಾಲಿಸದೆ ಗುಂಪುಗೂಡಿ ಅಭಿಮಾನಿಗಳ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದ. ಘಟನೆ ಸಂಬಂಧ ಜೆ.ಜೆ ನಗರ ಪೊಲೀಸರು ಇಮ್ರಾನ್ ಪಾಷಾನನ್ನು ಬಂಧಿಸಿದ್ದರು.
ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್:ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಯುವತಿ ಅಮೂಲ್ಯ ಲಿಯೋನ್ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಳು. ಇದು ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಮೂಲ್ಯಳನ್ನು ದೇಶದ್ರೋಹ ಪ್ರಕರಣದಡಿ ಬಂಧಿಸಲಾಗಿತ್ತು. ಇದಾದ ಕೆಲವೇ ದಿನಗಳ ಅಂತರದಲ್ಲಿ ಟೌನ್ ಹಾಲ್ ಮುಂದೆ ಹಮ್ಮಿಕೊಂಡಿದ್ದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಯುವತಿ ಆದ್ರಾ ಪ್ರತ್ಯೇಕ ಕಾಶ್ಮೀರ ಮಾಡುವಂತೆ ಒತ್ತಾಯಿಸಿ ಭಿತ್ತಿಪತ್ರ ಪ್ರದರ್ಶಿಸಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿತ್ತು.