ಬೆಂಗಳೂರು: ನಗರದ ಪಾದಚಾರಿ ಮಾರ್ಗಗಗಳೂ ಸೇರಿದಂತೆ ವಿದ್ಯುತ್ ಪ್ರಸರಣ ಘಟಕಗಳ ಸುತ್ತಮುತ್ತಲ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಲು ಎಚ್ಚರ ವಹಿಸಬೇಕು ಎಂದು ಹೈಕೋರ್ಟ್ ಬೆಸ್ಕಾಂ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಿದೆ. ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳು ಹಾಗೂ ರಾಜಕಾಲುವೆಗಳ ಮೇಲೆ ಅಳವಡಿಸಲಾಗಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ ಬಿ ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್. ಕಿಣಗಿ ಅವರಿದದ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ. ಆರ್. ಮೋಹನ್, ರಸ್ತೆ ಬದಿಗಳಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳ ಸುತ್ತಲ ಪ್ರದೇಶದಲ್ಲಿ ನೈರ್ಮಲ್ಯ ಇಲ್ಲವಾಗಿದೆ. ಇದರಿಂದ ಜನ ಮೂತ್ರ ವಿಸರ್ಜನೆಗೆ ಮುಂದಾಗುತ್ತಿದ್ದಾರೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಟ್ರಾನ್ಸ್‌ಫಾರ್ಮರ್ ಸೇರಿದಂತೆ ವಿದ್ಯುತ್ ಘಟಕಗಳ ಸುತ್ತಲ ಜಾಗಗಳಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ನೈರ್ಮಲ್ಯ ಕಾಪಾಡಬೇಕು ಎಂದು ಸೂಚನೆ ನೀಡಿತು.
ಪ್ರತಿ ತಿಂಗಳು ಪ್ರಗತಿ ವರದಿ ಸಲ್ಲಿಸಿ:ಬೆಸ್ಕಾಂ ಪರ ವಕೀಲರು, ಈವರೆಗೂ ಸುಮಾರು ಒಟ್ಟು 2,587 ಟ್ರಾನ್ಸ್‌ಫಾರ್ಮರ್‌ಗಳಲ್ಲಿ 1,554 ಸ್ಥಳಾಂತರ ಮಾಡಿದ್ದು, 1,033 ಬಾಕಿ ಉಳಿದಿವೆ. ಈ ಟ್ರಾನ್ಸ್‌ಫಾರ್ಮರ್‌ಗಳನ್ನು ಹಂತ ಹಂತವಾಗಿ ಸ್ಥಳಾಂತರ ಮಾಡುತ್ತಿದ್ದು, 2,023ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಎಲ್ಲವನ್ನೂ ಸ್ಥಳಾಂತರಿಸುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಪ್ರತಿ ತಿಂಗಳು ಸ್ಥಳಾಂತರ ಮಾಡಿದ ಟ್ರಾನ್ಸ್‌ಫಾರ್ಮರ್ ವಿವರವನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.