ಬೆಂಗಳೂರು: ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಯುವಕರು ಮಹಿಳಾ ಸಮಾನತೆ ಕುರಿತು ಅರ್ಥ ಮಾಡಿಕೊಂಡು ಸ್ಪಂದಿಸಬೇಕಿದೆ. ಇಂದಿನ ಯುವತಿಯರು ಮದುವೆ ಮಾಡಿಕೊಳ್ಳುವ ಮುನ್ನ ತನ್ನ ಭಾವಿ ಸಂಗಾತಿ ಅಡುಗೆ ಕೆಲಸ ಬರುತ್ತದೆಯೇ ಎಂಬುದನ್ನು ಖಚಿತ ಪಡಿಸಿಕೊಂಡ ನಂತರವೇ ಮದುವೆಗೆ ಒಪ್ಪಿಗೆ ಸೂಚಿಸಬೇಕಿದೆ ಎಂದು ಹಿರಿಯ ಲೇಖಕಿ ಹೆಚ್.ಎಸ್. ಅನುಪಮ ಸಲಹೆ ನೀಡಿದರು.
ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮುನ್ನಡೆ, ಸಾಧನಾ, ಸಮೃಧ್ಧಿ ಮತ್ತು ಗಾರ್ಮೆಂಟ್ ಲೇಬರ್ ಯೂನಿಯನ್ ಸಂಸ್ಥೆಗಳು ಭಾನುವಾರ ಹಮ್ಮಿಕೊಂಡಿದ್ದ ದುಡಿಯುವ ಮಾನಿನಿಯರ ಮಹಾಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್.ಎಸ್. ಅನುಪಮ ಮಹಿಳೆಯರು ನಿಜವಾದ ಅರ್ಥದಲ್ಲಿ ಹತ್ತು ತೋಳ್ಬಲ ಹೊಂದಿರುವ ಚಾಮುಂಡೇಶ್ವರಿಯರು. ಇವರು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಲೇ ಮನೆಯಲ್ಲಿ ಅಡುಗೆ ಕೆಲಸ, ಮಕ್ಕಳನ್ನು ಸಂಭಾಳಿಸುವ ಕೆಲಸ ಹೀಗೆ ಹಲವಾರು ಜವಾಬ್ಧಾರಿಗಳನ್ನು ನಿಭಾಯಿಸಬೇಕಾಗಿದೆ ಎಂದರು.
ಪುರುಷರು ಪರಾವಲಂಬಿ ಜೀವಿಗಳಾಗಿ ಬದಕುತ್ತಿದ್ದಾರೆ:ಭಾರತದ ಪತಿಯರು ಮೊದಲಿನಿಂದಲೂ ಪರಾವಲಂಬಿ ಜೀವಿಗಳಾಗಿ ಬದಕುತ್ತಿದ್ದಾರೆ. ಕಚೇರಿ ಕೆಲಸ ಮುಗಿಸಿಕೊಂಡು ಬಂದು ಹೆಂಡತಿಗೆ ಈರುಳ್ಳಿ ಹೆಚ್ಚಲು ಸಹ ಸಹಾಯ ಮಾಡುವುದಿಲ್ಲ. ಇಂದಿನ ಯುವತಿಯರು ಮದುವೆಯಾಗುವ ಮುನ್ನ, ಅಥವಾ ಪ್ರೀತಿ ಮಾಡುವ ಮುನ್ನ ತನ್ನ ಭಾವಿ ಸಂಗಾತಿಗೆ ಅಡುಗೆ ಮಾಡಲು ಬರುತ್ತದೆಯೇ ಅಥವಾ ಕಲಿಯಲು ಆಸಕ್ತಿಯಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದರು.
ಈ ಹಿಂದೆ ಮಹಿಳೆಯರನ್ನು ನಾಲ್ಕು ಗೋಡೆಯ ಅಡುಗೆಮನೆಯಲ್ಲಿ ಬಂಧಿಸಿಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಮಹಿಳೆಯೂ ಕೂಡ ಮನೆಯಿಂದ ಹೊರಗೆ ಹೋಗಿ ದುಡಿಯುತ್ತಿದ್ದಾಳೆ. ಆದರೆ, ಯಾವ ಕ್ಷೇತ್ರದಲ್ಲಿ ಮಹಿಳೆಯನ್ನು ದುಡಿಸಿಕೊಳ್ಳಲಾಗುತ್ತದೆ ಎಂಬುದು ಬಹಳ ಮುಖ್ಯ. ಕಡಿಮೆ ವೇತನ ಸಿಗುವ ಸೇವಾ ಕ್ಷೇತ್ರದಲ್ಲಿ ಶೇ.56 ಮಹಿಳೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ನಿರ್ಧಾರ ತೆಗೆದುಕೊಳ್ಳುವ ಮ್ಯಾನೇಜಮೆಂಟ್ ಕ್ಷೇತ್ರದಲ್ಲಿ ಕೇವಲ 14 ಮಹಿಳೆಯರು ಮಾತ್ರ ಕೆಲಸ ಮಾಡುತ್ತಿದ್ದಾರೆ. ನರ್ಸಿಂಗ್ ಕ್ಷೇತ್ರದಲ್ಲಿ ಶೇ. 99ರಷ್ಟು ಮಹಿಳೆಯರೇ ಕೆಲಸ ಮಾಡುತ್ತಿದ್ದಾರೆ ಎಂದರು.
ದುಡಿಯುವುದರ ಜೊತೆಗೆ ವರ್ತಮಾನದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು:ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ರಾಜಕಾರಣಿ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ದುಡಿಯುವ ಕಾರ್ಮಿಕರಿಗೆ ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದೇ ಉದ್ದೇಶವಾಗಬಾರದು. ದುಡಿಯುವುದರ ಜೊತೆಗೆ ವರ್ತಮಾನದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಶ್ನೆ ಮಾಡುವುದನ್ನು ಕಲಿಯಬೇಕು. ದುಡಿಯುವ ವರ್ಗ ವಿಚಾರವಂತರಾದಾಗ ಮಾತ್ರ ಈ ದೇಶದಲ್ಲಿ ಬದಲಾವಣೆ ಸಾಧ್ಯ ಎಂದರು.