ಬೆಂಗಳೂರು:ದೇವರು ಎಷ್ಟು ನನಗೆ ಶಕ್ತಿ ಕೊಟ್ಟಿದ್ದಾನೆ. ಆ ಸಂಪೂರ್ಣ ಶಕ್ತಿ ಬಳಸಿ ವಿಧಾನಸೌಧದಲ್ಲಿ ತೆಗೆದುಕೊಳ್ಳುವ ಎಲ್ಲಾ ತೀರ್ಮಾನ ಈ ಸಮಾಜದ ಏಳಿಗೆಗೆ ಇರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಶ್ರೇಷ್ಠ ಮಾನವತಾವಾದಿ. ಪರಿವರ್ತನೆಯ ಸಂಕೇತ ವಾಲ್ಮೀಕಿಯವರು. ಅವರು ಇಡೀ ವಿಶ್ವಕ್ಕೆ ಬೆಳಕನ್ನು ನೀಡಿದರು. ವಾಲ್ಮೀಕಿ ರಾಮಾಯಣ ಬರುವ ಮುನ್ನ ಯಾರಿಗಾದರೂ ರಾಮಾಯಣದ ಬಗ್ಗೆ ಗೊತ್ತಿತ್ತೋ ಇಲ್ವೋ ನನಗೆ ಗೊತ್ತಿಲ್ಲ. ನಾನು ಅತ್ಯಂತ ವಿನಯದಿಂದ ಹೇಳುತ್ತೇನೆ. ನಾನು ಶ್ರೀರಾಮನ ಕಾಲಿನ ದೂಳಿಗೂ ಸಮನಲ್ಲ. ಹಾಗಾಗಿ ಅದನ್ನು ಬೋಧನೆ ಮಾಡಬೇಡಿ. ಶ್ರೀ ರಾಮಚಂದ್ರನಿಗೆ ಅವರೇ ಸರಿಸಾಟಿ. ನನ್ನನ್ನು ಶ್ರೀರಾಮಚಂದ್ರ ಎಂದು ಬೋಧಿಸುವುದನ್ನು ಮುಂದುವರಿಸಬೇಡಿ. ಅದು ಸರಿಯಲ್ಲ ಎಂದು ತಿಳಿಸಿದರು.
ಯಾರಿಗೂ ಗುಲಾಮರಾಗುವುದು ಬೇಡ:ಇದೇ ವೇಳೆ ಶಾಸಕ ರಾಜೂ ಗೌಡರ ಗುಲಾಮನಾಗಿರುವೆ ಶಬ್ದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ, ಜೀವನದಲ್ಲಿ ಯಾರಿಗೂ ಗುಲಾಮನಾಗುವ ಅಗತ್ಯ ಇಲ್ಲ. ನೀನು ಗುಲಾಮನಾಗುವುದಾದರೆ ಬದುಕು ಕೊಟ್ಟ ದೈವಕ್ಕೆ ಗುಲಾಮನಾಗಿರು. ಬದುಕು ಕೊಟ್ಟಿದ್ದಾನೆ, ನ್ಯಾಯ ನೀತಿ ಕೊಟ್ಟಿದ್ದಾನೆ. ಏಕೆ ಬೇಕು ಇದು ನಿಮಗೆ?. ವಾಲ್ಮೀಕಿ ಅಂದರೆ ಸ್ವಾಭಿಮಾನದ ಸಂಕೇತ. ಅಪ್ಪಿತಪ್ಪಿ ಆ ಶಬ್ದ ಮುಂದೆ ಬಳಸಬೇಡಿ. ರಾಜೂ ಗೌಡರು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಆದರೆ ವಾಸ್ತವತೆ ಮರೆಯಬಾರದು ಎಂದು ಬುದ್ಧಿವಾದ ಹೇಳಿದರು.
ಸಾಮಾಜಿಕ ನ್ಯಾಯವು ಭಾಷಣದಿಂದ ಸಿಗುವುದಿಲ್ಲ. ಕೃತಿಯಿಂದ ಬರಬೇಕು. ಬದ್ಧತೆಯಿಂದ ಕೆಲಸ ಮಾಡಬೇಕು. ಬರೇ ಭಾಷಣದ ಸರಕಾಗಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಬೊಮ್ಮಾಯಿ, ರಾಮರಾಜ್ಯ ಅಂದರೆ ಎಲ್ಲರಿಗೂ ಸಮಾನವಾದ ಅವಕಾಶ ಕೊಡುವುದಾಗಿದೆ. ಹಲವರು ಮೀಸಲಾತಿ ನೀಡಿದರೆ ನ್ಯಾಯಾಲಯದಲ್ಲಿ ಸಮಸ್ಯೆ ಆಗುತ್ತೆ ಎಂದಿದ್ದರು. ಸಂವಿಧಾನದಲ್ಲಿ ಸಮಾನತೆ ಕೊಡುವ ಅವಕಾಶ ಇದೆ. ಒಂದು ಹೆಜ್ಜೆ ಮುಂದಿಡೋಣ ಆಮೇಲೆ ಬಂದಿದ್ದು ಬರಲಿ. ಇಚ್ಛಾಶಕ್ತಿ ಇರಬೇಕು. ಆ ಮೂಲಕ ಹೆಜ್ಜೆ ಇಟ್ಟಿದ್ದೇವೆ. ಈ ತೀರ್ಮಾನಕ್ಕೆ ಕಾನೂನು ಅಡಿ ಏನೆಲ್ಲಾ ರಕ್ಷಣೆ ಮಾಡಲು ಸಾಧ್ಯ ಅದನ್ನೆಲ್ಲಾ ಮಾಡುತ್ತೇವೆ. ಇದು ನಿಮ್ಮ ಗೆಲುವು, ನಿಮ್ಮ ಹೋರಾಟದ ಗೆಲುವಾಗಿದೆ ಎಂದರು.