ಬೆಂಗಳೂರು: ಕೃಷ್ಣಾ ನದಿ ಕಣಿವೆಯಲ್ಲಿ ಪ್ರವಾಹ ತಡೆ, ನಿಯಂತ್ರಣ ಹಾಗೂ ನಿರ್ವಹಣೆ ಸಂಬಂಧ ಮಹಾರಾಷ್ಟ್ರ ಜಪಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಜತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಸಿದರು.
ಸುಮಾರು 50 ನಿಮಿಷಗಳ ಕಾಲ ಸಭೆ ನಡೆಸಿದ ಸಿಎಂ, ಪ್ರವಾಹದಿಂದ ಕೃಷ್ಣಾ ಮತ್ತು ಭೀಮಾ ನದಿ ಪಾತ್ರಗಳಲ್ಲಿ ಆಗುವ ಅವಘಡಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಪ್ರವಾಹ ನಿಯಂತ್ರಿಸುವ ಸಂಬಂಧ ಎರಡೂ ರಾಜ್ಯಗಳು ಸಮನ್ವಯತೆಯಡಿ ಕಾರ್ಯನಿರ್ವಹಿಸಲು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ, ಪ್ರವಾಹದಿಂದ ಕೃಷ್ಣಾ ಮತ್ತು ಭೀಮಾ ನದಿ ಭಾಗದಲ್ಲಿ ಆಗುವ ಅವಘಡಗಳ ಬಗ್ಗೆ ಮಾತನಾಡಿದ್ದೇವೆ. ಮಳೆ ಪ್ರಮಾಣ, ಜಲಾಶಯದಲ್ಲಿ ನೀರು ಬಿಡುವ ಬಗ್ಗೆ ಮಾಹಿತಿ ವಿನಿಮಯ ಆಗಿದೆ. ಮಹಾರಾಷ್ಟ್ರದಿಂದ 4 ಟಿಎಂಸಿ ನೀರನ್ನು ಬೇಸಿಗೆಯಲ್ಲಿ ಪಡೆದು, ಅಷ್ಟೇ ನೀರನ್ನು ಮಳೆಗಾಲದಲ್ಲಿ ಮಹಾರಾಷ್ಟ್ರಕ್ಕೆ ಬಿಡುಗಡೆ ಮಾಡುವ ಕುರಿತು ತಾಂತ್ರಿಕ ಸಲಹಾ ಸಮಿತಿ ರಚನೆಗೆ ನಿರ್ಧರಿಸಲಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಜಂಟಿ ಯೋಜನೆಯಾದ ಧೂದ್ ಗಂಗಾ ಯೋಜನೆಯನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದರು.