ಬೆಂಗಳೂರು: ಮಯಾಂಕ್ ಅಗರ್ವಾಲ್ ಮತ್ತು ಡಿ.ನಿಶ್ಚಲ್ ಅವರ ಶತಕದ ಜೊತೆಯಾಟದ ಹೊರತಾಗಿಯೂ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಹುಬ್ಬಳ್ಳಿ ಟೈಗರ್ಸ್, ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ತನ್ನ ಆರನೇ ಜಯ ದಾಖಲಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬೆಂಗಳೂರು ಬ್ಲಾಸ್ಟರ್ಸ್ ಮೊದಲನೇ ಓವರ್‌ನಲ್ಲೇ ಭುವನ್ ರಾಜು (6) ವಿಕೆಟ್ ಕಳೆದುಕೊಂಡಿತು. ನಂತರ ಜೊತೆಯಾದ ಡಿ.ನಿಶ್ಚಲ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಶತಕದ ಜೊತೆಯಾಟ ನೀಡಿದರು.
ಮೊದಲ ಆರು ಓವರ್‌ಗಳಲ್ಲಿ ನಿಶ್ಚಲ್ ಹಾಗೂ ಮುಂದಿನ ಹಂತದಲ್ಲಿ ಮಯಾಂಕ್ ಅಗರ್ವಾಲ್ ಹುಬ್ಬಳ್ಳಿ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಈ ಹಂತದಲ್ಲಿ 34 ಎಸೆತಗಳಲ್ಲಿ ಮಯಾಂಕ್ ಹಾಗೂ 38 ಎಸೆತಗಳಲ್ಲಿ ನಿಶ್ಚಲ್ ತಮ್ಮ ಅರ್ಧಶತಕದ ಮೈಲಿಗಲ್ಲು ತಲುಪಿದರು. 3 ಬೌಂಡರಿ 6 ಸಿಕ್ಸರ್‌ಸಹಿತ 68 ರನ್ ಗಳಿಸಿ ಮುನ್ನುಗ್ಗುತ್ತಿದ್ದ ಮಯಾಂಕ್ 14ನೇ ಓವರ್‌ನಲ್ಲಿ ಕೆ.ಸಿ.ಕಾರಿಯಪ್ಪಗೆ ವಿಕೆಟ್ ಒಪ್ಪಿಸುವ ಮೂಲಕ 122 ರನ್‌ಗಳ ಜೊತೆಯಾಟಕ್ಕೆ ಬ್ರೇಕ್ ಬಿತ್ತು. ಅದೇ ಓವರ್‌ನಂತ್ಯದಲ್ಲಿ ನಿಶ್ಚಲ್ (54) ವಿಕೆಟ್ ಅನ್ನೂ ಸಹ ಕಾರಿಯಪ್ಪ ಉರುಳಿಸಿದರು.
ನಂತರ ಕ್ರೀಸ್‌ಗೆ ಬಂದ ಶುಭಾಂಗ್ ಹೆಗ್ಡೆ (28) ರನ್ ಗಳಿಸಿ ವಿದ್ವತ್ ಕಾವೇರಪ್ಪಗೆ ವಿಕೆಟ್ ನೀಡಿದರು. ಸೂರಜ್ ಅಹುಜಾ (6) ಹೆಚ್ಚು ಪ್ರಭಾವ ಬೀರುವಲ್ಲಿ ವಿಫಲರಾದರು. ಕೆಳಕ್ರಮಾಂಕದಲ್ಲಿ ಲೋಚನ್ ಅಪ್ಪಣ್ಣ (11*) ಮತ್ತು ಅಮನ್ ಖಾನ್ (4*) ಅಜೇಯರಾಗುಳಿದರು. ಡಿ.ನಿಶ್ಚಲ್ ಮತ್ತು ಅಗರ್ವಾಲ್ ಅವರ ಸ್ಕೋರ್ನ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಹುಬ್ಬಳ್ಳಿ ಪರ ಕೆ.ಸಿ.ಕಾರಿಯಪ್ಪ 3/31 ಹಾಗೂ ವಿದ್ವತ್ ಕಾವೇರಪ್ಪ 2/29 ವಿಕೆಟ್ ಪಡೆದರು.
ಬೃಹತ್ ಮೊತ್ತ ಬೆನ್ನತ್ತಿದ ಹುಬ್ಬಳ್ಳಿ ಇಂಪ್ಯಾಕ್ಟ್ ಆಟಗಾರನಾಗಿ ಇನ್ನಿಂಗ್ಸ್ ಆರಂಭಿಸಿದ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿರುವ ಲವನಿತ್ ಸಿಸೋಡಿಯಾ 9 ಎಸೆತಗಳಲ್ಲಿ 20 ರನ್ ಗಳಿಸಿ ಔಟಾದರು. ಆದರೆ ಎರಡನೇ ಓವರ್‌ನಲ್ಲಿ ಬೆಂಗಳೂರು ಆಟಗಾರರು ಕ್ಯಾಚ್ ಕೈಚೆಲ್ಲುವ ಮೂಲಕ ವರದಾನ ಪಡೆದ ಮೊಹಮ್ಮದ್ ತಾಹಾ ಆಕರ್ಷಕ ಅರ್ಧಶತಕ ಸಿಡಿಸಿ ಬೆಂಗಳೂರು ತಂಡ ತನ್ನ ತಪ್ಪಿಗೆ ಬೆಲೆ ತೆರುವಂತೆ ಮಾಡಿದರು.
ತಾಹಾಗೆ ಜೊತೆಯಾದ ಕೆ.ಎಲ್.ಶ್ರೀಜಿತ್ ಸಹ ಬಿರುಸಿನ ಆಟವಾಡುವ ಮೂಲಕ, ಈ ಜೋಡಿ 54 ಎಸೆತಗಳಲ್ಲಿ 101 ರನ್‌ಗಳನ್ನು ಕಲೆಹಾಕಿತು. 35 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಸಹಿತ 66 ರನ್ ಗಳಿಸಿದ್ದ ಮೊಹಮ್ಮದ್ ತಾಹಾ ಈ ಹಂತದಲ್ಲಿ ರಿಷಿ ಬೋಪಣ್ಣಗೆ ವಿಕೆಟ್ ಒಪ್ಪಿಸಿದರು. ನಂತರದಲ್ಲಿ 45 ರನ್ ಗಳಿಸಿದ್ದ ಶ್ರೀಜಿತ್ ಸಹ ಸರ್ಫರಾಜ್ ಅಶ್ರಫ್ ಬೌಲಿಂಗ್‌ನಲ್ಲಿ ಔಟಾದರು. ಅವರ ಬೆನ್ನಲ್ಲೇ ಬಿ.ಎ.ಮೋಹಿತ್ (10) ಅಶ್ರಫ್ಗೆ ಎರಡನೇ ಬಲಿಯಾದರು. ಅಂತಿಮ ಐದು ಓವರ್‌ಗಳಲ್ಲಿ ಹುಬ್ಬಳ್ಳಿ ಗೆಲುವಿಗೆ 35 ರನ್‌ಗಳ ಅಗತ್ಯವಿತ್ತು. ಕ್ರೀಸ್ನಲ್ಲಿದ್ದ ನಾಯಕ ಮನೀಶ್ ಪಾಂಡೆ (35*) ಮತ್ತು ಪ್ರವೀಣ್ ದುಬೆ (8*) ಅಜೇಯರಾಗಿ ಪಂದ್ಯವನ್ನು ವಿಜಯದತ್ತ ಕೊಂಡೊಯ್ದರು. ಹುಬ್ಬಳ್ಳಿ 6 ವಿಕೆಟ್‌ಗಳ ಆರಾಮದಾಯಕ ಗೆಲುವು ದಾಖಲಿಸಿತು.
ಸಂಕ್ಷಿಪ್ತ ಸ್ಕೋರ್ ವಿವರ: ಬೆಂಗಳೂರು ಬ್ಲಾಸ್ಟರ್ಸ್ - 188-5 (20) (ಮಯಾಂಕ್ ಅಗರ್ವಾಲ್ - 68, ಡಿ.ನಿಶ್ಚಲ್ - 54, ಶುಭಾಂಗ್ ಹೆಗ್ಡೆ - 29, ಕೆ.ಸಿ.ಕಾರಿಯಪ್ಪ - 3/31, ವಿದ್ವತ್ ಕಾವೇರಪ್ಪ - 2/29)ಹುಬ್ಬಳ್ಳಿ ಟೈಗರ್ಸ್ - 190-4(18.3) (ಮೊಹಮ್ಮದ್ ತಾಹಾ - 66, ಕೆ.ಎಲ್. ಶ್ರೀಜಿತ್ - 45, ಮನೀಶ್ ಪಾಂಡೆ - 35*, ಸರ್ಫರಾಜ್ ಅಶ್ರಫ್ - 2/34), ಪಂದ್ಯ ಶ್ರೇಷ್ಠ - ಮೊಹಮ್ಮದ್ ತಾಹ
ಇದನ್ನೂ ಓದಿ:Maharaja Trophy: ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಗೆದ್ದು ಬೀಗಿದ ಮಂಗಳೂರು ಡ್ರ್ಯಾಗನ್ಸ್: ಬೆಂಗಳೂರಿಗೆ ಸತತ ಆರನೇ ಬಾರಿ ಸೋಲು