ಬೆಂಗಳೂರು : ಶಿವಮೊಗ್ಗ ಲಯನ್ಸ್ ತಂಡವನ್ನು 9 ವಿಕೆಟ್‌ಗಳ ಅಂತರದಿಂದ ಮಣಿಸಿದ ಗುಲ್ಬರ್ಗಾ ಮಿಸ್ಟಿಕ್ಸ್ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮೂರನೇ ಜಯ ಸಾಧಿಸಿದೆ. ಟೂರ್ನಿ ಆರಂಭದ ಮೂರು ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಶಿವಮೊಗ್ಗ ಲಯನ್ಸ್ ಸತತ ಮೂರನೇ ಸೋಲು ಅನುಭವಿಸಿದೆ. ಗುಲ್ಬರ್ಗಾ ಪರ ಬೌಲಿಂಗ್‌ನಲ್ಲಿ ಹಾರ್ದಿಕ್ ರಾಜ್ (4/27) ನಾಯಕ ವೈಶಾಕ್ ವಿಜಯ್ ಕುಮಾರ್ (2/9) ಹಾಗೂ ಬ್ಯಾಟಿಂಗ್‌ನಲ್ಲಿ ಚೇತನ್ ಎಲ್.ಆರ್ ಹಾಗೂ ಆದರ್ಶ್ ಪ್ರಜ್ವಲ್ ಗೆಲುವಿನ ರೂವಾರಿಗಳಾಗಿ ಮಿಂಚಿದರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ರೋಹನ್ ಕದಂ (0) ಮತ್ತು ನಿಹಾಲ್ ಉಳ್ಳಾಲ್ (15) ಆರಂಭಿಕರನ್ನು ಬಹುಬೇಗನೆ ಕಳೆದುಕೊಂಡಿತು. ಮೂರನೇ ಕ್ರಮಾಂಕದಲ್ಲಿ ರೋಹಿತ್ ಕುಮಾರ್ (25) ಮತ್ತು ರೋಹನ್ ನವೀನ್ (33) ಕೊಡುಗೆಯ ನೆರವಿನಿಂದ ಪವರ್‌ಪ್ಲೇ ಅಂತ್ಯಕ್ಕೆ 2 ವಿಕೆಟ್‌ಗಳ ನಷ್ಟಕ್ಕೆ 60 ರನ್ ಗಳಿಸಿತು. ಆದಾಗ್ಯೂ ಗುಲ್ಬರ್ಗದ ಎಡಗೈ ಸ್ಪಿನ್ನರ್ ಹಾರ್ದಿಕ್ ರಾಜ್ ಎಂಟನೇ ಓವರ್‌ನಲ್ಲಿ ರೋಹನ್ ನವೀನ್ ಮತ್ತು ಅಭಿನವ್ ಮನೋಹರ್ (0) ಅವರ ವಿಕೆಟ್ ಪಡೆದರು. ಮುಂದಿನ ಓವರ್‌ನಲ್ಲಿ ಅಮಿತ್ ವರ್ಮಾ ಬೌಲಿಂಗ್‌ನಲ್ಲಿ ರೋಹಿತ್ ಕುಮಾರ್ ಔಟಾದರು.
ಶ್ರೇಯಸ್ ಗೋಪಾಲ್ (16) ಮತ್ತು ಪ್ರಣವ್ ಭಾಟಿಯಾ (19) ಎಚ್ಚರಿಕೆಯ 36 ರನ್‌ಗಳ ಜೊತೆಯಾಟವಾಡಿದರು. ನಂತರ ಬಂದ ಕ್ರಾಂತಿ ಕುಮಾರ್ (5) ಮತ್ತು ಶಿವರಾಜ್ (0) ಬೇಗನೆ ವಿಕೆಟ್ ಕೊಟ್ಟು ನಿರಾಸೆ ಮೂಡಿಸಿದರು. ಅಂತಿಮವಾಗಿ, ಶಿವಮೊಗ್ಗ ಲಯನ್ಸ್ 17.4 ಓವರ್‌ಗಳಲ್ಲಿ 121 ಮೊತ್ತಕ್ಕೆ ಆಲೌಟ್ ಆಯಿತು. ಗುಲ್ಬರ್ಗ ಪರ ಹಾರ್ದಿಕ್ ರಾಜ್ (3/27), ವೈಶಾಕ್ ವಿಜಯ್ ಕುಮಾರ್ (2/9) ಮತ್ತು ಅಭಿಲಾಷ್ ಶೆಟ್ಟಿ (2/21) ವಿಕೆಟ್ ಉರುಳಿಸಿದರು.