ಬೆಂಗಳೂರು: ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 5 ವಿಕೆಟ್‌ಗಳ ಅಂತರದಲ್ಲಿ ಮಣಿಸಿದ ಹುಬ್ಬಳ್ಳಿ ಟೈಗರ್ಸ್ ಮಹಾರಾಜ ಟ್ರೋಫಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಮನ್ವಂತ್ ಕುಮಾರ್ (4 ವಿಕೆಟ್ ಹಾಗೂ 28 ರನ್) ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಹುಬ್ಬಳ್ಳಿ ಸುಲಭ ಜಯಕಂಡಿತು. ಮತ್ತೊಂದೆಡೆ, ಹಾಲಿ ರನ್ನರ್ ಅಪ್ ಬೆಂಗಳೂರು ಬ್ಲಾಸ್ಟರ್ಸ್ ಟೂರ್ನಿಯಲ್ಲಿ ಸತತ ಮೂರನೇ ಸೋಲು ಅನುಭವಿಸಿತು.
ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡು ಬೆಂಗಳೂರು ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿತು. ಬೆಂಗಳೂರು ಕೇವಲ 106 ರನ್ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಹುಬ್ಬಳ್ಳಿ ಆರಂಭಿಕ ಜೋಡಿಯಿಂದ 44 ರನ್ ಜೊತೆಯಾಟ ಪಡೆಯಿತು. ಲವನಿತ್ ಸಿಸೋಡಿಯಾ ಚುರುಕಾದ ಇನ್ನಿಂಗ್ಸ್ ಕಟ್ಟಿದರು. 10 ರನ್ ಗಳಿಸಿದ್ದ ಮೊಹಮ್ಮದ್ ತಾಹಾರನ್ನು ಶುಭಾಂಗ್ ಹೆಗ್ಡೆ ಪೆವಿಲಿಯನ್ಗೆ ಕಳಿಸಿದರು.
ಈ ಎರಡು ವಿಕೆಟ್‌ಗಳ ಬೆನ್ನಲ್ಲೇ ಕೆ.ಶ್ರೀಜಿತ್ ಮತ್ತು ನಾಗಭರತ್ ವಿಕೆಟ್ ಸಹ ಉರುಳಿತು. ಇದ್ದ ಅಲ್ಪ ಗುರಿ ಸಾಧಿಸುವಲ್ಲಿ ತಂಡ ಎಡವಿ ಬೀಳಲಿದೆ ಎಂಬ ಸಂದರ್ಭದಲ್ಲಿ ನಾಯಕ ಮನೀಶ್ ಪಾಂಡೆ ಮತ್ತು ಮನ್ವಂತ್ ಕುಮಾರ್ ತಂಡಕ್ಕೆ ಆಸರೆಯಾದರು. ಇಬ್ಬರು ಆಟಗಾರರು ವೇಗವಾಗಿ ಇನ್ನಿಂಗ್ಸ್ ಕಟ್ಟಿದರು. ಗೆಲುವಿಗೆ 9 ರನ್ ಬಾಕಿ ಇದ್ದಾಗ ಮನ್ವಂತ್ ವಿಕೆಟ್ ಕೊಟ್ಟರು. ನಾಯಕ ಮನೀಶ್ ಪಾಂಡೆ ಅಜೇಯವಾಗಿ ನಿಂತು ತಂಡವನ್ನು ಗೆಲುವಿನ ದಡ ಸೇರಿಸಿದರು.