ಬೆಂಗಳೂರು: ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಹುಬ್ಬಳ್ಳಿ ಟೈಗರ್ಸ್ ಅಂಕಪಟ್ಟಿಯಲಿ ಅಗ್ರ ಸ್ಥಾನ ಕಾಪಾಡಿಕೊಂಡಿದೆ. ಹುಬ್ಬಳ್ಳಿ ಪರ ಮನ್ವಂತ್ ಕುಮಾರ್ (5/33) ಮೊಹಮ್ಮದ್ ತಾಹಾ (51) ಮತ್ತು ನಾಯಕ ಮನೀಶ್ ಪಾಂಡೆ (56*) ಆಟದ ನೆರವಿನಿಂದ ಮಂಗಳೂರು ತಂಡವನ್ನು ನಿರಾಯಾಸವಾಗಿ ಹುಬ್ಬಳ್ಳಿ ಸೋಲಿಸಿತು.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಮಂಗಳೂರು ಡ್ರಾಗನ್ಸ್ ಆರಂಭಿಕರಾದ ಶರತ್ ಬಿ ಆರ್ ಹಾಗೂ ರೋಹನ್ ಪಾಟೀಲ್ 43 ರನ್‌ಗಳ ಜೊತೆಯಾಟದ ಮೂಲಕ ಉತ್ತಮ ಆರಂಭ ನೀಡಿದರು. ಆದರೆ ಪವರ್ ಪ್ಲೇ ಅಂತ್ಯದ ವೇಳೆಗೆ ಶರತ್ ಬಿ ಆರ್ (40) ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ನಂತರ ಎರಡನೇ ವಿಕೆಟ್‌ಗೆ ಜೊತೆಯಾದ ಕೆ ವಿ ಸಿದ್ಧಾರ್ಥ್ ಹಾಗೂ ರೋಹನ್ ಪಾಟೀಲ್ 60 ರನ್‌ಗಳ ಜೊತೆಯಾಟವಾಡಿದರು.
ಈ ಹಂತದಲ್ಲಿ 12ನೇ ಓವರ್‌ನಲ್ಲಿ ಎಸೆದ ಪ್ರವೀಣ್ ದುಬೆ, ರೋಹನ್ ಪಾಟೀಲ್ ವಿಕೆಟ್ ಪಡೆದರು. ಕೆವಿ ಸಿದ್ಧಾರ್ಥ್ (53) ಮತ್ತು ತಿಪ್ಪಾರೆಡ್ಡಿ (19) ಸಾದಾರಣ ರನ್ ದಾಖಲಿಸಿದರು. 16.5 ಓವರ್‌ಗಳಲ್ಲಿ 150 ರನ್‌ಗಳ ಗಡಿಯನ್ನು ತಲುಪಿದ್ದ ಮಂಗಳೂರು, ನಂತರದಲ್ಲಿ ಮನ್ವಂತ್ ಕುಮಾರ್ ದಾಳಿಗೆ ನಲುಗಿತು. ಅಂತಿಮವಾಗಿ ಮಂಗಳೂರು 9 ವಿಕೆಟ್ ಕಳೆದುಕೊಂಡು 167 ರನ್‌ಗಳಿಗೆ ತನ್ನ ಇನ್ನಿಂಗ್ಸ್ ಕೊನೆಗೊಳಿಸಿತು. ಹುಬ್ಬಳ್ಳಿ ಟೈಗರ್ಸ್‌ನ ಪರ ಬೌಲಿಂಗ್‌ನಲ್ಲಿ ವೇಗಿ ಮನ್ವಂತ್ ಕುಮಾರ್ (5/33) ಪಡೆದು ಮಿಂಚಿದರು.
ಸ್ಪರ್ಧಾತ್ಮಕ ಗುರಿ ಪಡೆದ ಹುಬ್ಬಳ್ಳಿ ಟೈಗರ್ಸ್ ತನ್ನ ಮೊದಲ ನಾಲ್ಕು ಓವರ್‌ಗಳಲ್ಲಿ 46 ರನ್ ಗಳಿಸಿತು. ಆರಂಭಿಕ ಆಟಗಾರ ಮೊಹಮ್ಮದ್ ತಾಹಾ ಮಂಗಳೂರು ಡ್ರ್ಯಾಗನ್‌ಗಳ ಬೌಲರ್‌ಗಳ ಮೇಲೆ ಆಕ್ರಮಣಕಾರಿ ಆಟವಾಡಿದರು. ಆದರೆ ಐದನೇ ಓವರ್‌ನಲ್ಲಿ ನಾಗ ಭರತ್ (14) ಮತ್ತು ಕೆ ಎಲ್ ಶ್ರೀಜಿತ್ (4) ವಿಕೆಟ್ ಪತನವಾದವು. ಒಂದೆಡೆ ವಿಕೆಟ್ ಉರುಳಿದರೂ ಸಹ ಹುಬ್ಬಳ್ಳಿ ಪರ ರನ್ ಹರಿವಿಗೆ ಅಡ್ಡಿಯಾಗಲಿಲ್ಲ.
ಮೊಹಮ್ಮದ್ ತಾಹಾ 21 ಎಸೆತಗಳಲ್ಲಿ ತಮ್ಮ ಅರ್ಧ ಶತಕವನ್ನು ದಾಖಲಿಸಿ ಆನಂದ್ ದೊಡ್ಡಮನಿಗೆ ವಿಕೆಟ್ ನೀಡಿದರು. ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ಪ್ರವೀಣ್ ದುಬೆಗೆ ಜೊತೆಯಾದ ನಾಯಕ ಮನೀಶ್ ಪಾಂಡೆ ತಂಡದ ರನ್ ವೇಗಕ್ಕೆ ಬಲ ತುಂಬಿದರು. ಪ್ರವೀಣ್ ದುಬೆ (14) ಔಟ್ ಆದ ಬಳಿಕವೂ ಅಬ್ಬರದ ಆಟ ಮುಂದುವರೆಸಿದ ಮನೀಶ್ ಪಾಂಡೆ 33 ಎಸೆತಗಳಲ್ಲಿ 6 ಸಿಕ್ಸರ್ ಸಹಿತ (56*) ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿಯುವುದರೊಂದಿಗೆ ಹುಬ್ಬಳ್ಳಿ ಟೈಗರ್ಸ್ ತಂಡವು ಐದು ವಿಕೆಟ್‌ಗಳಿಂದ ಗೆಲುವು ಸಾಧಿಸಿತು.
ಸಂಕ್ಷಿಪ್ತ ಸ್ಕೋರ್: ಮಂಗಳೂರು ಡ್ರಾಗನ್ಸ್ - 167-9 (20) (ಕೆ.ವಿ. ಸಿದ್ಧಾರ್ಥ್ - 53, ಬಿ.ಆರ್. ಶರತ್ - 40, ಮನ್ವಂತ್ ಕುಮಾರ್ - 5/33-4, ಲವಿಶ್ ಕೌಶಲ್ - 2/26-4), ಹುಬ್ಬಳ್ಳಿ ಟೈಗರ್ಸ್ - 170/5 (18.2) (ಮನೀಷ್ ಪಾಂಡೆ - 56*, ಮೊಹಮ್ಮದ್ ತಾಹಾ - 51, ಆನಂದ್ ದೊಡ್ಡಮನಿ - 3/34-3.2, ಕೃಷ್ಣಪ್ಪ ಗೌತಮ್ - 1/32-4)ಪಂದ್ಯ ಶ್ರೇಷ್ಠ - ಮನ್ವಂತ್ ಕುಮಾರ್.
ಇದನ್ನೂ ಓದಿ:ಮಹಾರಾಜ ಟ್ರೋಫಿ: ಶಿವಮೊಗ್ಗ ಲಯನ್ಸ್ ಮಣಿಸಿದ ಹುಬ್ಬಳ್ಳಿ ಟೈಗರ್ಸ್, 7ನೇ ಗೆಲುವಿನೊಂದಿಗೆ ಸೆಮೀಸ್ಗೆ ಲಗ್ಗೆ