ಬೆಂಗಳೂರು: ಮಂಗಳೂರು ಡ್ರ್ಯಾಗನ್ಸ್ ವಿರುದ್ಧ 8 ವಿಕೆಟ್‌ಗಳಿಂದ ಜಯ ಸಾಧಿಸುವ ಮೂಲಕ ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಗುಲ್ಬರ್ಗ ಪರ ಬೌಲಿಂಗ್‌ನಲ್ಲಿ ಅಭಿಲಾಷ್ ಶೆಟ್ಟಿ (3/33) ಬ್ಯಾಟಿಂಗ್‌ನಲ್ಲಿ ಕೆ.ವಿ ಅನೀಶ್ (72*) ಹಾಗೂ ಎಲ್.ಆರ್ ಚೇತನ್ (58) ಗೆಲುವಿನ ರೂವಾರಿಗಳಾಗಿ ಮಿಂಚಿದರು.
ಮಂಗಳೂರು ಡ್ರ್ಯಾಗನ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ಗುಲ್ಬರ್ಗಾ ಮಿಸ್ಟಿಕ್ಸ್ ಎರಡನೇ ಓವರ್‌ನಲ್ಲಿಯೇ ರೋಹನ್ ಪಾಟೀಲ್ ವಿಕೆಟ್ ಪಡೆಯಿತು. ದ್ವಿತೀಯ ವಿಕೆಟ್‌ಗೆ ಜೊತೆಯಾದ ಬಿ ಆರ್ ಶರತ್ ಮತ್ತು ತಿಪ್ಪಾರೆಡ್ಡಿ ಮೊದಲ 51 ರನ್ ಗಳಿಸುವ ಮೂಲಕ ಮಂಗಳೂರಿಗೆ ಉತ್ತಮ ಆರಂಭ ನೀಡಿದರು. ಆರನೇ ಓವರ್‌ನಲ್ಲಿ ಬಿ ಆರ್ ಶರತ್ (38) ವಿಕೆಟ್ ಪಡೆದ ಗುಲ್ಬರ್ಗಾ ಮಿಸ್ಟಿಕ್ಸ್ ಬೌಲರ್‌ಗಳು ಮಂಗಳೂರು ಬ್ಯಾಟ್ಸ್‌ಮನ್‌ಗಳು ನೆಲೆ ನಿಲ್ಲಲು ಅವಕಾಶವನ್ನೇ ನೀಡಲಿಲ್ಲ.
ಪರಿಣಾಮ 5.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿದ್ದ ಮಂಗಳೂರು ಡ್ರ್ಯಾಗನ್ಸ್ 12ನೇ ಓವರ್ ಅಂತ್ಯಕ್ಕೆ 7 ವಿಕೆಟ್‌ಗಳನ್ನ ಕಳೆದುಕೊಂಡು 87 ರನ್‌ಗೆ ಕುಸಿಯಿತು. ಆರನೇ ಕ್ರಮಾಂಕದಲ್ಲಿ ಬಂದ ಅನಿರುದ್ಧ್ ಜೋಶಿ (46) ಕಲೆಹಾಕಿದ ರನ್ ಪರಿಣಾಮ ಮಂಗಳೂರು ಡ್ರ್ಯಾಗನ್ಸ್ 19.1 ಓವರ್‌ಗಳಲ್ಲಿ 144 ರನ್‌ಗಳಿಗೆ ಆಲೌಟ್ ಆಯಿತು. ಗುಲ್ಬರ್ಗ ಪರ ಅಭಿಲಾಶ್ ಶೆಟ್ಟಿ 3, ವೈಶಾಕ್ ವಿಜಯ್ ಕುಮಾರ್ ಹಾಗೂ ಹಾರ್ದಿಕ್ ರಾಜ್ ತಲಾ 2 ವಿಕೆಟ್ ಪಡೆದರು.