ಬೆಂಗಳೂರು:ಇಂದು ಮಹಾಲಯ ಅಮಾವಾಸ್ಯೆ, ಹಿರಿಯರಿಗೆ ತರ್ಪಣ ಬಿಡುವುದು ವಾಡಿಕೆ. ಪೂರ್ವಿಕರನ್ನು ಸ್ಮರಿಸುವ ದಿನವಾದ ಇಂದು ಬೆಂಗಳೂರಿನ ಚಿಕ್ಕಪೇಟೆಯ ಕಾಶಿವಿಶ್ವನಾಥ ದೇವಾಲಯದ ಬಳಿ ಜನಸಾಗರವೇ ನೆರೆದಿತ್ತು.
ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಚಿಕ್ಕಪೇಟೆ ಕಾಶಿ ವಿಶ್ವನಾಥನ ದೇವಾಲಯದ ಬಳಿ ಇದಕ್ಕಾಗಿ ಇಂದು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ದೇವಾಲಯದ ಆವರಣದಲ್ಲಿ ಈ ಕಾರ್ಯವನ್ನು ಮೊದಲಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಈ ಪ್ರಮಾಣದ ಜನರು ಸೇರಿದ್ದು ಮಾತ್ರ ಅಪರೂಪವಾಗಿತ್ತು.
ಚಿಕ್ಕಪೇಟೆಯ ಕಾಶಿವಿಶ್ವನಾಥ ದೇವಾಲಯದ ಮುಂದೆ ಜನಸಾಗರ ಕೊರೊನಾದಂತಹ ಸಾಂಕ್ರಾಮಿಕ ಪಿಡುಗು ವ್ಯಾಪಿಸಿರುವ ನಡುವೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಕಂಡುಬರಲಿಲ್ಲ. ಮಾಸ್ಕ್ ಇಲ್ಲ. ಸಾಮಾಜಿಕ ಅಂತರ ಮೊದಲೇ ಇರಲಿಲ್ಲ. ಜನರಲ್ಲಿ ಕೊರೊನಾ ಆತಂಕವೂ ಇದ್ದಂತಿರಲಿಲ್ಲ. ಪಿತೃಗಳಿಗೆ ಪಿಂಡ ಪ್ರದಾನ ಮಾಡುವ ಈ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನೇ ಮರೆತು ಹೋದಂತಿತ್ತು. ಬೆಳಗ್ಗೆಯಿಂದಲೇ ಹಿರಿಯರಿಗೆ ಪೂಜೆ ಸಲ್ಲಿಸುವ ಕಾರ್ಯಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ದೇವಾಲಯದ ಬಳಿ ನೆರೆದಿದ್ದರು. ಪೂಜಾ ಸಾಮಗ್ರಿಗಳನ್ನು ಹಿಡಿದು ಸರತಿ ಸಾಲಿನಲ್ಲಿ ನಿಂತಿದ್ದರು.
ನಂತರ ಸಾಲಿನಲ್ಲಿ ನಿಲ್ಲಿಸಿ ಹಿರಿಯರಿಗೆ ತರ್ಪಣ ಬಿಡಿಸಲಾಯಿತು. ಇತ್ತೀಚೆಗೆ ಮನೆಯಲ್ಲಿ ಅಮಾವಾಸ್ಯೆ ಮಾಡುವ ಕಾರ್ಯ ಕಡಿಮೆಯಾಗುತ್ತಿದೆ. ಹೀಗಾಗಿ, ಜನ ದೇವಸ್ಥಾನ ಅಥವಾ ಮಂದಿರಗಳಲ್ಲಿ ತರ್ಪಣ ಬಿಡುವ ಕೆಲಸಕ್ಕೆ ಮುಂದಾಗಿದ್ದಾರೆ.