ಬೆಂಗಳೂರು:ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಚಾರದಿಂದ ಕಳೆಗಟ್ಟಿದ್ದ ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಅಭ್ಯರ್ಥಿಯ ಮತಪ್ರಚಾರ, ಇಂದು ಸದ್ದಿಲ್ಲದಂತಾಗಿದೆ. ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ.ನಾಶಿ ಇಂದು ಮತಯಾಚನೆಗೆ ಇಳಿಯದೇ, ಆದಿಚುಂಚನಗಿರಿ ಮಠದ ಶಾಖೆಗೆ ಭೇಟಿ ನೀಡಿದರು.
ನಿರ್ಮಲಾನಂದ ಶ್ರೀ ಭೇಟಿಯಾದ ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಅಭ್ಯರ್ಥಿ
ಉಪಚುನಾವಣೆ ಸಮೀಪಿಸುತ್ತಿದ್ದು, ಮೂರು ಪಕ್ಷಗಳು ಸಹ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಇಂದು ಮಹಾಲಕ್ಷ್ಮಿ ಕ್ಷೇತ್ರದ ಅಭ್ಯರ್ಥಿಗಳು ಆದಿಚುಂಚನಗಿರಿ ಮಠದ ಶಾಖೆಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಇಂದು ಬೆಳಗ್ಗೆಯೇ ಕಾಂಗ್ರೆಸ್ ಅಭ್ಯರ್ಥಿ ಶಿವರಾಜು, ಜೆಡಿಎಸ್ ನ ಗಿರೀಶ್ ಕೆ.ನಾಶಿ ಹಾಗೂ ಬಿಜೆಪಿಯ ಗೋಪಾಲಯ್ಯ, ಆದಿಚುಂಚನಗಿರಿ ಮಠದ ಶಾಖೆಗೆ ಭೇಟಿ ನೀಡಿ, ನಿರ್ಮಲಾನಂದ ಸ್ವಾಮಿಗಳ ಆಶೀರ್ವಾದ ಪಡೆದರು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ, ಒಕ್ಕಲಿಗ ಸಿಎಂರನ್ನು ಕೆಳಗಿಳಿಸಿದ ಅನರ್ಹ ಶಾಸಕನನ್ನು ಸಮುದಾಯವರಿಂದ ಸೋಲಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಸ್ವಾಮೀಜಿಯವರ ಫೋಟೋ ಜೊತೆಗೆ ಈ ರೀತಿಯ ಬರಹವಿರುವ ಫೋಟೋ ಕೂಡಾ ವೈರಲ್ ಆಗಿದೆ. ಕಾಂಗ್ರಸ್ ಅಭ್ಯರ್ಥಿ ಶಿವರಾಜು ಮಠಕ್ಕೆ ಬೇಟಿ ನೀಡಿದ ಬಳಿಕ, ಪಕ್ಷದ ಮುಖಂಡರ ಜೊತೆ ಮಾತುಕತೆಯಲ್ಲಿ ತೊಡಗಿದ್ದು, ಬೆಳಿಗ್ಗೆ ಕೆಲವೇ ಹೊತ್ತು ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ನಾಳೆ ದಿನೇಶ್ ಗುಂಡೂರಾವ್ ಕ್ಷೇತ್ರಕ್ಕೆ ಬರಲಿದ್ದು, ಪ್ರಚಾರ ಬಿರುಸುಗೊಳ್ಳಲಿದೆ, ಜನತೆ ಅನರ್ಹ ಶಾಸಕನನ್ನು ಖಂಡಿತ ಗೆಲ್ಲಿಸುವುದಿಲ್ಲ ಎಂದರು.