ಬೆಂಗಳೂರು: ಮಹದೇವಪುರ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರದಲ್ಲೊಂದು. ಮಳೆ ಕ್ಷೇತ್ರವನ್ನು ಇನ್ನಿಲ್ಲದಂತೆ ಕಾಡಿತ್ತು. ಈ ಮಧ್ಯೆ ವಿಧಾನಸಭೆ ಚುನಾವಣೆ ಎದುರಾಗಿದೆ. ಸದ್ಯ ಬಿಜೆಪಿ ಆಖಾಡವಾಗಿರುವ ಕ್ಷೇತ್ರದ ಸ್ಥಿತಿಗತಿ ಏನಿದೆ? ಎಂಬ ಸಮಗ್ರ ವರದಿ ಇಲ್ಲಿದೆ.
ಮಹದೇವಪುರ ಕ್ಷೇತ್ರ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ 2ನೇ ಕ್ಷೇತ್ರ. ಅತಿ ಹೆಚ್ಚು ಐಟಿ ಕಂಪನಿಗಳಿಗೂ ತವರು. ಬೆಂಗಳೂರಿನ ಹೊರವಲಯಗಳು ಮಹದೇವಪುರ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ಐಟಿ ಕಂಪನಿಗಳ ಆಶ್ರಯ ತಾಣವಾಗಿರುವ ಈ ಕ್ಷೇತ್ರದಲ್ಲಿ ವಲಸಿಗ ಮತದಾರರ ಸಂಖ್ಯೆ ಅಧಿಕ. ಬಹುತೇಕ ಟೆಕ್ಕಿಗಳು ಕ್ಷೇತ್ರದಲ್ಲಿ ವಾಸವಾಗಿದ್ದಾರೆ. ಅನ್ಯ ರಾಜ್ಯದ ಜನರು ಈ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ.
'ಕೈ' ವಶಕ್ಕೆ ಕಾರ್ಯತಂತ್ರ: ಬಹುರಾಷ್ಟ್ರೀಯ ಕಂಪನಿಗಳ ತಾಣವಾಗಿರುವ ಕ್ಷೇತ್ರದಲ್ಲಿ 11 ಗ್ರಾಮ ಪಂಚಾಯತಿಗಳಿವೆ. ಹಾಗಾಗಿ ನಗರೀಕರಣ ಹಾಗೂ ಹಳ್ಳಿಗಳ ಸಮೀಕರಣದ ಕ್ಷೇತ್ರ ಇದಾಗಿದೆ. ಸದ್ಯ ಇದು ಬಿಜೆಪಿಯ ಭದ್ರಕೋಟೆ. 2008ರ ಕ್ಷೇತ್ರ ವಿಂಗಡಣೆ ಬಳಿಕ ರಚನೆಯಾದ ಕ್ಷೇತ್ರದಲ್ಲಿ ಹಾಲಿ ಶಾಸಕ ಅರವಿಂದ ಲಿಂಬಾವಳಿ ಬಿಜೆಪಿಯ ಗೆಲುವಿನ ಕುದುರೆಯಾಗಿದ್ದಾರೆ. ಸತತ 3 ಬಾರಿಯೂ ಅರವಿಂದ ಲಿಂಬಾವಳಿ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿ ಹಿಡಿದುಕೊಂಡಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಬಿಜೆಪಿಯಿಂದ ಮಹದೇವಪುರ ಕ್ಷೇತ್ರವನ್ನು ವಶಕ್ಕೆ ಪಡೆಯಲು ಪಣತೊಟ್ಟಿದೆ.
ಚುನಾವಣಾ ಲೆಕ್ಕಾಚಾರ: ಸತತ ಮೂರು ಬಾರಿ ಗೆಲುವು ಸಾಧಿಸಿದ ಅರವಿಂದ ಲಿಂಬಾವಳಿಗೆ ಈ ಬಾರಿಯೂ ಬಿಜೆಪಿ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಸಾಧ್ಯತೆ ಇದೆ. ಇತ್ತ ಲಿಂಬಾವಳಿಗೆ ಕ್ಷೇತ್ರ ಬದಲಾವಣೆಯ ಮಾತುಗಳು ಕೇಳಿ ಬರುತ್ತಿದೆ. ಅವರು ಈ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತವನ್ನು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ 4ನೇ ಬಾರಿ ಕ್ಷೇತ್ರದಲ್ಲಿ ಗೆಲುವಿನ ಕಣ್ಣಿಟ್ಟಿದ್ದಾರೆ. ಆದರೆ ಆಡಳಿತ ವಿರೋಧಿ ಅಲೆ ಬಲವಾಗಿರುವುದು ಈ ಬಾರಿ ಲಿಂಬಾವಳಿಗೆ ಸವಾಲಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ.
ಲಿಂಬಾವಳಿ ವಿರೋಧಿ ಅಲೆ:ಕ್ಷೇತ್ರದಲ್ಲಿನ ಸಮಸ್ಯೆಗಳನ್ನೇ ಬಂಡವಾಳವಾಗಿಸಿ ಕಾಂಗ್ರೆಸ್ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಅರವಿಂದ ಲಿಂಬಾವಳಿಯವರ ಬಿಗಿ ಹಿಡಿತವನ್ನು ಸಡಿಲಗೊಳಿಸಲು ಯತ್ನಿಸುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ಹಿರಿದಾಗಿದೆ. ಸುಮಾರು 10ಕ್ಕೂ ಅಧಿಕ ಮಂದಿ ಆಕಾಂಕ್ಷಿಗಳಾಗಿದ್ದಾರೆ. ಆದರೆ ಈ ಬಾರಿ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಹೆಚ್.ನಾಗೇಶ್ ಅವರನ್ನು ಪಕ್ಷಕ್ಕೆ ಕರೆತಂದಿರುವ ಕಾಂಗ್ರೆಸ್ ಮಹದೇವಪುರ ಕ್ಷೇತ್ರದಲ್ಲಿ ಕಣಕ್ಕಳಿಸುವ ಇರಾದೆಯಲ್ಲಿದೆ. ಆ ಮೂಲಕ ಅರವಿಂದ ಲಿಂಬಾವಳಿಯನ್ನು ಮಣಿಸುವ ತಂತ್ರವನ್ನು ಕಾಂಗ್ರೆಸ್ ಹೆಣೆದಿದೆ.
ಕ್ಷೇತ್ರದಲ್ಲಿ ಏನಿದ್ದರೂ ಬಿಜೆಪಿ ಮತ್ರು ಕಾಂಗ್ರೆಸ್ ನಡುವೆಯೇ ಬಹುವಾಗಿ ಜಿದ್ದಾಜಿದ್ದು ಇದೆ. ಜೆಡಿಎಸ್ನಿಂದ ಸ್ಥಳೀಯ ಮುನಿವೆಂಕಟಪ್ಪ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ಆಮ್ ಆದ್ಮಿ ಪಕ್ಷದಿಂದ ಅಶೋಕ್ ಮೃತ್ಯುಂಜಯ ಸ್ಪರ್ಧೆಗೆ ಇಳಿಯಲಿದ್ದಾರೆ ಎನ್ನಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿನ ರಾಜಕೀಯ, ಮತದಾರರ ಸಮೀಕರಣ ಬದಲಾಗಿದೆ ಎನ್ನಲಾಗಿದೆ. ಹೀಗಾಗಿ ಈ ಬಾರಿ ಕ್ಷೇತ್ರ ಜಿದ್ದಾಜಿದ್ದಿನ ಸ್ಪರ್ಧೆಗೆ ವೇದಿಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ.