ಬೆಂಗಳೂರು: ರಾಜ್ಯ ಸರ್ಕಾರದ ಮೇಲೆ ಮಾಫಿಯಾಗಳು ಹಿಡಿತ ಸಾಧಿಸಿದರೆ ಏನೆಲ್ಲ ಆಗಬಹುದು ಎಂಬುದಕ್ಕೆ ಮಾಧ್ಯಮ ಅಂಕಣ ಸಾಕ್ಷಿ. ದೇಶದ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿ ಆರ್.ಎನ್.ಕುಲಕರ್ಣಿ ಅವರ ಕೊಲೆಗೆ ಸಂಬಂಧಿಸಿದಂತೆ ಮೂರು ತಿಂಗಳಾದರೂ ಆರೋಪಪಟ್ಟಿ ದಾಖಲಾಗಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಮುಗುಮ್ಮಾಗಿ ಕುಳಿತಿದೆ ಎಂದು ಜೆಡಿಎಸ್ ಟೀಕಿಸಿದೆ.
ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಮೈಸೂರಿನಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಈ ಕೊಲೆ ಪ್ರಕರಣದ ಹಿಂದೆ ಭೂ ಮಾಫಿಯಾದ ಕೈವಾಡವಿರುವುದು ಸ್ಪಷ್ಟ. ತಮ್ಮ ನೆರೆಮನೆಯವರ ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕುಲಕರ್ಣಿ ಅವರು ದೂರು ದಾಖಲಿಸಿದ್ದರು. ಈ ದೂರಿನ ನಂತರ ಅವರ ಕೊಲೆಯಾಗಿದೆ. ನಮ್ಮ ದೇಶದ ಗುಪ್ತಚರ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದವರ ಕೊಲೆ ಪ್ರಕರಣವೂ ಸರ್ಕಾರಕ್ಕೆ ನಾಟುವುದಿಲ್ಲ ಎಂದರೆ ಏನರ್ಥ? ಮೂರು ತಿಂಗಳಾದರೂ ಆರೋಪ ಪಟ್ಟಿ ಸಿದ್ಧವಾಗಿಲ್ಲ ಎಂಬುದು ನಮ್ಮ ಪೊಲೀಸ್ ವ್ಯವಸ್ಥೆಯ ನಿಷ್ಕ್ರಿಯತೆಗೆ ಹಿಡಿದ ಕನ್ನಡಿ ಎಂದು ಆರೋಪಿಸಿದೆ. ದೂರಿನನ್ವಯ ಅನಧಿಕೃತ ಕಟ್ಟಡದ ಬಗ್ಗೆ ಮೈಸೂರು ಮಹಾನಗರ ಪಾಲಿಕೆಯು ಯಾವುದೇ ಕ್ರಮ ಕೈಗೊಂಡಿಲ್ಲ. ರಿಯಲ್ ಎಸ್ಟೇಟ್ ಎಂಬುದು ದಂಧೆಕೋರರ ಅಡ್ಡೆಯಾಗಿದೆ. ಕಮಿಷನ್ ಗಿರಾಕಿಗಳಾಗಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇಂತಹ ವಿಷಯಗಳು ಗಂಭೀರವಲ್ಲ.
ಈ ಪ್ರಕರಣದ ನಂತರ ಜೀವಭಯದಿಂದಾಗಿ ಕುಲಕರ್ಣಿಯವರ ಪತ್ನಿ ಮನೆ ತೊರೆದು ವೃದ್ಧಾಶ್ರಮಕ್ಕೆ ಸೇರಿದ್ದಾರೆ. ದೇಶಕ್ಕೆ ಸೇವೆ ಸಲ್ಲಿಸಿದ ಅಧಿಕಾರಿ ಆತನ ಕುಟುಂಬಕ್ಕೆ ರಕ್ಷಣೆ ಕೊಡದಷ್ಟು ಅಮಾನವೀಯವಾಗಿದೆ, ಬಿಜೆಪಿ ಸರ್ಕಾರದ ಆಡಳಿತ. ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಅವರೇ, ಈಗಲಾದರೂ ಸೂಕ್ತ ಕ್ರಮ ಕೈಗೊಳ್ಳಿ ಎಂದು ಜೆಡಿಎಸ್ ಆಗ್ರಹಿಸಿದೆ.
ಇನ್ನು, ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್ ರಸ್ತೆ ಉದ್ಘಾಟನೆಗೆ ಸಿದ್ಧವಾಗಿದೆ. ಪ್ರಯಾಣದ ಸಮಯ ಕಡಿಮೆಯಾಗುತ್ತದೆ. ಇದರಿಂದ ಸಾಕಷ್ಟು ಅನುಕೂಲವಿದೆ. ಆದರೆ, ಇಷ್ಟು ವರ್ಷಗಳ ಕಾಲ ಜೀವನೋಪಾಯ ಕಂಡುಕೊಂಡಿದ್ದ ಹೆದ್ದಾರಿ ಬದಿಯ, ಸುತ್ತಲಿನ ಪಟ್ಟಣದ ವ್ಯಾಪಾರಿಗಳ ಬದುಕಿನ ಮೇಲೆ ಕಾರ್ಮೋಡ ಮೂಡಿದೆ ಎಂದು ಜೆಡಿಎಸ್ ಹೇಳಿದೆ. ಹೆದ್ದಾರಿ ರಸ್ತೆಯ ಕಾರಣದಿಂದ ತಟ್ಟೆ ಇಡ್ಲಿಗೆ ಪ್ರಸಿದ್ಧವಾದ ಬಿಡದಿ ಹೊಟೇಲ್ಗಳು ಖಾಲಿಯಾಗಿವೆ. ರಾಮನಗರದ ಹಣ್ಣು-ತರಕಾರಿ ಮಾರಾಟಗಾರರು ಚಿಂತೆಗೀಡಾಗಿದ್ದಾರೆ. ಚನ್ನಪಟ್ಟಣದ ಗೊಂಬೆ ಕೇಳುವವರೇ ಇಲ್ಲದಂತಾಗಿದೆ. ಸುಪ್ರಸಿದ್ಧ ಮದ್ದೂರಿನ ವಡೆ ತಿನ್ನುವುದು ಇನ್ನು ಕಷ್ಟ. ಮಂಡ್ಯವಂತೂ ಮಾಯವಾಗಿ, ಶ್ರೀರಂಗಪಟ್ಟಣ ಕಾಣೆಯಾಗಿದೆ. ಲಕ್ಷಾಂತರ ಜನರ ಸಣ್ಣ-ಪುಟ್ಟ ಉದ್ದಿಮೆ, ಉದ್ಯೋಗದ ಮೇಲೆ ಬಿದ್ದಿರುವ ಹೊಡೆತ ಊಹಿಸಲು ಅಸಾಧ್ಯ ಎಂದಿದೆ.
ಯಾವುದೇ ಬೃಹತ್ ಯೋಜನೆಗಳ ರೂಪುರೇಷೆ ಸ್ಥಳೀಯರ ಬದುಕನ್ನು ಒಳಗೊಳ್ಳಬೇಕು. ಇಲ್ಲದಿದ್ದರೆ, ಪರ್ಯಾಯ ವ್ಯವಸ್ಥೆಯಾದರೂ ಸಿದ್ದವಾಗಬೇಕು. ಆದರೆ, ಜನರ ಬದುಕಿನ ಪ್ರಶ್ನೆಯನ್ನು ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಕಡೆಗಣಿಸಿದೆ. ಯಾವುದೇ ಪ್ರಗತಿಯು ಬದುಕನ್ನು ಜೋಡಿಸುವ ಕೆಲಸಕ್ಕೆ ಕೈಹಾಕಬೇಕು. ಈ ಹೆದ್ದಾರಿಯ ಅಗತ್ಯ ಖಂಡಿತ ಇದೆ. ಆದರೆ, ಅದನ್ನೇ ನಂಬಿದ್ದ ಸಾವಿರಾರು ಸಣ್ಣ-ಪುಟ್ಟ ವ್ಯಾಪಾರಿಗಳ ಮತ್ತು ಅಲ್ಲಿನ ಕೆಲಸಗಾರರ ಅಗತ್ಯಗಳನ್ನು ಕೇಳುವವರೇ ಇಲ್ಲದಂತಾಗಿದೆ.
ಸಾಮೂಹಿಕ ಚಿಂತನೆ ಇಲ್ಲದೇ ಯೋಜನೆ-ಯೋಚನೆ ಮಾಡಿದರೆ ಆಗುವ ಅನಾಹುತಗಳು ಇವು ಎಂದಿದೆ. ರಾಜ್ಯ ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿ. ವೈಜ್ಞಾನಿಕ ರೀತಿಯಲ್ಲಿ ಪ್ರವೇಶ-ನಿರ್ಗಮನದ ದಾರಿ ಮತ್ತು ಪರ್ಯಾಯ ವ್ಯವಸ್ಥೆ ಸಿದ್ಧವಾಗಲಿ. ರಸ್ತೆ ನಾವೇ ಮಾಡಿದ್ದು ಎಂದು ಬರೀ ಪ್ರಚಾರ ಗಿಟ್ಟಿಸಿಕೊಳ್ಳಲು ಹವಣಿಸುತ್ತ ಕುಳಿತರೆ ಸಾಲದು ಎಂದು ಜೆಡಿಎಸ್ ಟೀಕಿಸಿದೆ.
ಇದನ್ನೂಓದಿ:ಮಂಡ್ಯ ಉಸ್ತುವಾರಿ ಸ್ಥಾನದಿಂದ ಆರ್.ಅಶೋಕ್ ಬಿಡುಗಡೆ: ಸಿಎಂ ಬೊಮ್ಮಾಯಿ