ಬೆಂಗಳೂರು:ಜೆಡಿಎಸ್ನಿಂದ ಹೊರಗೆ ಕಾಲಿಟ್ಟಿರುವ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಸಂಬಂಧ ಇಂದು ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿವಾಸಕ್ಕೆ ಆಗಮಿಸುವ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಸಂಬಂಧ ಇನ್ನೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಕಳೆದ ಕೆಲ ತಿಂಗಳಿಂದ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ದಿ. ಎಸ್.ಬಂಗಾರಪ್ಪ ಅವರ ರಾಜಕೀಯ ಉತ್ತರಾಧಿಕಾರಿ ಎಂದೇ ಪ್ರತಿಬಿಂಬಿತರಾಗಿರುವ ಮಧುಬಂಗಾರಪ್ಪ ಅವರ ಸೇರ್ಪಡೆ ಮಲೆನಾಡು, ಕರಾವಳಿ ಕರ್ನಾಟಕ ಭಾಗಗಳಲ್ಲಿ 'ಕೈ'ಗೆ ಶಕ್ತಿ ತುಂಬಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸಹ ಇವರನ್ನು ಪಕ್ಷಕ್ಕೆ ಕರೆಸಿಕೊಳ್ಳಲು ಉತ್ಸುಕರಾಗಿದ್ದು ಇಂದಿನ ಭೇಟಿಯ ನಂತರ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ದಿನಾಂಕ ನಿಗದಿ ಆಗುವ ಸಾಧ್ಯತೆ ಇದೆ.
ಜೆಡಿಎಸ್ನಿಂದ ದೂರ:
ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನ ಕಳೆದುಕೊಂಡು ಜೆಡಿಎಸ್ನಲ್ಲಿ ಕೇವಲ ನೆಪಮಾತ್ರದ ನಾಯಕರಾಗಿ ಮಾತ್ರ ಉಳಿದುಕೊಂಡಿರುವ ಮಧು ಬಂಗಾರಪ್ಪ ಕೊನೆಗೂ ತೆನೆ ಇಳಿಸಲು ಸಜ್ಜಾಗಿದ್ದಾರೆ. ಇವರನ್ನ ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿಯನ್ನು ಇತ್ತೀಚೆಗೆ ನೇಮಕ ಮಾಡಲಾಗಿತ್ತು. ಇದರಿಂದ ಇನ್ನಷ್ಟು ಬೇಸರಗೊಂಡಿರುವ ಅವರು ಪಕ್ಷ ತ್ಯಜಿಸಲು ಮುಂದಾಗಿದ್ದಾರೆ. ತಂದೆ ಹಾಗೂ ಮಾಜಿ ಸಿಎಂ ಆಗಿದ್ದ ಎಸ್ ಬಂಗಾರಪ್ಪ ಅವರಿಗೆ ರಾಜಕೀಯದಲ್ಲಿ ಸಾಕಷ್ಟು ಬೆಳೆಯುವ ಅವಕಾಶ ಕಲ್ಪಿಸಿದ್ದ ಕಾಂಗ್ರೆಸ್ ಪಕ್ಷದತ್ತ ಮಧುಬಂಗಾರಪ್ಪ ಮುಖ ಮಾಡಿದ್ದು, ಇಲ್ಲಿಯೇ ತಮ್ಮ ಮುಂದಿನ ರಾಜಕೀಯ ನೆಲೆ ಕಂಡುಕೊಳ್ಳಲು ತೀರ್ಮಾನಿಸಿದ್ದಾರೆ.