ಬೆಂಗಳೂರು:ಚೆಕ್ಬೌನ್ಸ್ ಪ್ರಕರಣದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು 6,96,70,000 ರೂ. ದಂಡ ಪಾವತಿಸದೇ ಇದ್ದರೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶಿಸಿದೆ.
6.60 ಕೋಟಿ ರೂಪಾಯಿ ಚೆಕ್ಬೌನ್ಸ್ ಪ್ರಕರಣ ಇದಾಗಿದೆ. ಚೆಕ್ ಮೊತ್ತ ಸೇರಿ ಆರು ಕೋಟಿ 96 ಲಕ್ಷದ 70 ಸಾವಿರ ರೂ. ಮೊತ್ತ ಪಾವತಿಸಬೇಕು ಎಂದು ಕೋರ್ಟ್ ತಿಳಿಸಿದೆ. 6,96,70,000 ರೂ. ದಂಡದಲ್ಲಿ 6,96,60,000 ದೂರುದಾರರಿಗೆ ಪರಿಹಾರ ರೂಪದಲ್ಲಿ ನೀಡಬೇಕು. ಇನ್ನುಳಿದ 10 ಸಾವಿರ ರೂ. ಅನ್ನು ಸರ್ಕಾರಕ್ಕೆ ದಂಡವಾಗಿ ಕಟ್ಟಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಹೀಗಿದೆ:ಆಕಾಶ್ ಆಡಿಯೋ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವೇಳೆ ಮಧು ಬಂಗಾರಪ್ಪ ರಾಜೇಶ್ ಎಕ್ಸ್‌ಪೋರ್ಟ್ ಸಂಸ್ಥೆಗೆ 6.60 ಕೋಟಿ ರೂ ಬಾಕಿ ಪಾವತಿಗೆ ಚೆಕ್ ನೀಡಿದ್ದರು. 2011ರಲ್ಲಿ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಇದರ ಬೆನ್ನಲ್ಲೇ ರಾಜೇಶ್ ಎಕ್ಸ್‌ಪೋರ್ಟ್ ಸಂಸ್ಥೆಯು 6.60 ಕೋಟಿ ರೂ. ಚೆಕ್ಬೌನ್ಸ್ ಪ್ರಕರಣ ದಾಖಲಿಸಿತ್ತು.
ಮಧು ಬಂಗಾರಪ್ಪ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. 2023ರ ಜ.17ರಂದು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ನೀಡಿತ್ತು. ಮಧು ಬಂಗಾರಪ್ಪ 6.60 ಕೋಟಿ ರೂ. ಮೊತ್ತದ ಪೈಕಿ 50 ಲಕ್ಷ ರೂ. ಮಾತ್ರ ಮರುಪಾವತಿಸಿದ್ದರು. ಉಳಿದ ಮೊತ್ತವನ್ನು ಪಾವತಿ ಮಾಡಿರಲಿಲ್ಲ. ಈ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. 2024ರ ಜ.30ರೊಳಗಾಗಿ 6.10 ಕೋಟಿ ರೂ.ಪಾವತಿ ಮಾಡುವುದಾಗಿ ಮಧು ಬಂಗಾರಪ್ಪ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಈ ಹಿಂದೆ ಕೊಟ್ಟಿದ್ದ ಮುಚ್ಚಳಿಕೆ ಪಾಲಿಸದ ಹಿನ್ನೆಲೆಯಲ್ಲಿ ಕೋರ್ಟ್ ಮುಚ್ಚಳಿಕೆ ಒಪ್ಪಲು ನಿರಾಕರಿಸಿದೆ.
ಇದನ್ನೂ ಓದಿ:20 ರೌಡಿಗಳ ಮನೆ ಮೇಲೆ ಸಿಸಿಬಿ ದಾಳಿ: ಕೋರ್ಟ್ಗೆ ಹಾಜರಾಗದ ನಾಲ್ವರ ಬಂಧನ