ಬೆಂಗಳೂರು :ಲಂಚ ಸ್ವೀಕಾರ ಪ್ರಕರಣದಲ್ಲಿ ಸಿಲುಕಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇಂದು ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ಹಾಜರಾಗುವ ಸಾಧ್ಯತೆ ಇದೆ. ನಿನ್ನೆ ಶಾಸಕರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಕೋರ್ಟ್ ಆದೇಶದ ಪ್ರತಿ ಕೈ ಸೇರಿದ 48 ಗಂಟೆಗಳೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಶಾಸಕರಿಗೆ ಸೂಚಿಸಿದ್ದು, ಯಾವುದೇ ಕ್ಷಣದಲ್ಲಿಯೂ ವಿರೂಪಾಕ್ಷಪ್ಪ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಾಡಾಳ್ ವಿರೂಪಾಕ್ಷಪ್ಪರಿಂದ ಸ್ಪಷ್ಟನೆ ಪಡೆಯಲು ಲೋಕಾಯುಕ್ತ ಅಧಿಕಾರಿಗಳು ಕೆಲವು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಬೆಂಗಳೂರು ಜಲಮಂಡಳಿ ಅಧಿಕಾರಿಯಾಗಿರುವ ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ ಅವರಿಗೂ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್ಡಿಎಲ್) ಗೂ ಏನು ಸಂಬಂಧ?, ಕೆಎಸ್ಡಿಎಲ್ ವಿಚಾರವಾಗಿ ಹಣ ಪಡೆಯುತ್ತಿರುವುದು ನಿಮಗೆ ಗೊತ್ತಿರಲಿಲ್ಲವೇ? ಮನೆಯಲ್ಲಿ ಸಿಕ್ಕ 6 ಕೋಟಿ ರೂಪಾಯಿ ಮೂಲವೇನು?, ಅಡಿಕೆಯಿಂದ ಬಂದ ಹಣವಾಗಿದ್ದರೆ ಅದಕ್ಕೆ ಸೂಕ್ತ ದಾಖಲೆಗಳೇನು? ಎಂಬೆಲ್ಲ ಪ್ರಶ್ನೆಗಳಿಗೆ ಮಾಡಾಳ್ ವಿರೂಪಾಕ್ಷಪ್ಪ ಉತ್ತರಿಸಬೇಕಿದೆ. ಇದನ್ನು ಹೊರತುಪಡಿಸಿ ದೂರುದಾರರು ಲೋಕಾಯುಕ್ತಗೆ ನೀಡಿರುವ ಸಾಕ್ಷಿಗಳೂ ಸಹ ಮಾಡಾಳ್ ಅವರಿಗೆ ಕಂಟಕವಾಗುವ ಸಾಧ್ಯತೆ ಇದೆ.
ನಿನ್ನೆ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ಪೀಠ ನಿರೀಕ್ಷಣಾ ಜಾಮೀನು ನೀಡಿದೆ. ಆದೇಶದ ಪ್ರತಿ ಸಿಕ್ಕ 48 ಗಂಟೆಗಳಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಐದು ಲಕ್ಷ ರೂಪಾಯಿಗಳ ಬಾಂಡ್ ನೀಡಬೇಕು. ಸಾಕ್ಷ್ಯಾಧಾರಗಳ ನಾಶಕ್ಕೆ ಮುಂದಾಗಬಾರದು ಎಂಬ ಷರತ್ತುಗಳನ್ನು ವಿಧಿಸಿದೆ.