ಬೆಂಗಳೂರು : ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಆರೋಪ ಪ್ರಕರಣವನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಇಲ್ಲವೇ ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಮನವಿಯನ್ನು ಪರಿಶೀಲನೆ ನಡೆಸಿ ಮುಂದಿನ 8 ವಾರಗಳಲ್ಲಿ ಪರಿಗಣಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಶ್ರೀರಾಮಸೇನೆ ದಾವಣಗೆರೆ ಘಟಕದ ಅಧ್ಯಕ್ಷ ಮಣಿಕಂಠ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಬಳಿ ಈ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿ ಆದೇಶಿಸಿದೆ. ಅಲ್ಲದೆ, ಅರ್ಜಿದಾರರು ಈ ಹಿಂದೆ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಮುಂದಿನ 8 ವಾರಗಳಲ್ಲಿ ಕಾನೂನು ರೀತಿ ಕ್ರಮ ಜರುಗಿಸುವಂತೆ ಸೂಚಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.
ಪ್ರಕರಣದ ಹಿನ್ನೆಲೆ ಏನು ? :ಮಾಡಾಳ್ ವಿರುಪಾಕ್ಷಪ್ಪ ಅವರ ಮೇಲೆ ಆರೋಪ ಕೇಳಿ ಬಂದಿರುವ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ಅಭಿವೃದ್ಧಿ ನಿಗಮ (ಕೆಎಸ್‌ಡಿಎಲ್)ಕ್ಕೆ ಕಚ್ಚಾವಸ್ತುಗಳ ಪೂರೈಕೆಗೆ ಗುತ್ತಿಗೆ ಪಡೆದವರಿಗೆ ಕಾರ್ಯಾದೇಶ ನೀಡಲು ಲಂಚ ಸ್ವೀಕರಿಸಿದ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಅದರ ಮೇಲುಸ್ತುವಾರಿಯನ್ನು ಹೈಕೋರ್ಟ್ ವಹಿಸಬೇಕು. ಇಲ್ಲವೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಅರ್ಜಿದಾರ ಸಂಸ್ಥೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಈ ಕುರಿತು ಸರ್ಕಾರ ಅಥವಾ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದೀರಾ ಎಂದು ಪ್ರಶ್ನಿಸಿತ್ತು. ಮನವಿ ಸಲ್ಲಿಸಿಲ್ಲ ಎಂದು ಅರ್ಜಿದಾರರ ಹೇಳಿದ್ದರು. ಹಾಗಿದ್ದರೆ ಸರ್ಕಾರ ಇಲ್ಲವೇ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಇದಕ್ಕೆ ಸಮ್ಮತಿಸಿದ್ದ ಅರ್ಜಿದಾರರು, ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿ ಅರ್ಜಿದಾರರು ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದರು. ಅದರಂತೆ, ಅರ್ಜಿದಾರರು 2023ರ ಮಾ.31ರಂದು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು.