ಕರ್ನಾಟಕ

karnataka

ETV Bharat / state

ಮಾಡಾಳ್ ಜಾಮೀನು ಅರ್ಜಿ: ಏಪ್ರಿಲ್ 15ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ

ನ್ಯಾಯಾಂಗ ಬಂಧನದಲ್ಲಿರುವ ಶಾಸಕ ವಿರೂಪಾಕ್ಷಪ್ಪ ಮಾಡಾಳ್​ ಅವರ ಜಾಮೀನು ಅರ್ಜಿ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಪ್ರಿಲ್​ 15ಕ್ಕೆ ಮುಂದೂಡಿದೆ.

Madal bail application: Court reserved the order for April 15
ಮಾಡಾಳ್ ಜಾಮೀನು ಅರ್ಜಿ: ಏಪ್ರಿಲ್ 15ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ

By

Published : Apr 11, 2023, 12:19 PM IST

ಬೆಂಗಳೂರು: ಲಂಚ ಪ್ರಕರಣದಲ್ಲಿ ನ್ಯಾಯಾಂಗದ ಬಂಧನದಲ್ಲಿರುವ ಚೆನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಪ್ರಿಲ್ 15ಕ್ಕೆ ಆದೇಶ ಕಾಯ್ದಿರಿಸಿದೆ. ಜೊತೆಗೆ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್​ಗೆ ಜಾಮೀನು ಅರ್ಜಿ ವಜಾಗೊಳಿಸಿದರೆ ಪ್ರಕರಣ ಮೂರನೇ ಆರೋಪಿ ಸುರೇಂದ್ರಗೆ ನ್ಯಾ. ಬಿ. ಜಯಂತ್ ಕುಮಾರ್ ಜಾಮೀನು‌ ನೀಡಿದ್ದಾರೆ.

ಅರ್ಜಿದಾರ ವಿರೂಪಾಕ್ಷಪ್ಪ ಮಾಡಾಳ್​ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ. ವಿ. ನಾಗೇಶ್, ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷರಾಗಿದ್ದ ಅರ್ಜಿದಾರರಿಗೆ ಟೆಂಡರ್ ಕರೆಯುವ ಅಧಿಕಾರವಿಲ್ಲ. ಅಧಿಕಾರಿಗಳಿಗೆ ಹಣ ಸಿಕ್ಕಿದೆ ಎನ್ನಲಾದ ಸ್ಥಳವು ಶಾಸಕರಿಗೆ ಸೇರಿಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರವೂ ಬಂಧನವಾಗಿಲ್ಲ‌. ಈಗಾಗಲೇ ಲೋಕಾಯುಕ್ತ ತನಿಖಾಧಿಕಾರಿಗಳು ತನಿಖೆ ಮುಕ್ತಾಯಗೊಳಿಸಿದ್ದಾರೆ‌. ಹೀಗಾಗಿ ಮಾಡಾಳ್ ಅವರಿಗೆ ಜಾಮೀನು ನೀಡಬೇಕು‌ ಎಂದು ಮನವಿ ಮಾಡಿಕೊಂಡರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಅಭಿಯೋಜಕ ಸಂತೋಷ್ ನಾಗರಾಳೆ, ದಾಳಿ ವೇಳೆ ಹಣ ಸಿಕ್ಕಿರುವ ಮನೆಗೆ ವಿರೂಪಾಕ್ಷಪ್ಪ ಮಾಡಾಳ್​ ಅವರೇ ಮಾಲೀಕರಾಗಿದ್ದಾರೆ. ಹಣ ದೊರೆತ ಕೊಠಡಿಯಲ್ಲಿ ತಂಗುತ್ತಿದ್ದರು ಎಂದು ಪ್ರಶಾಂತ್ ಮಾಡಾಳ್​ ಪತ್ನಿ ಹೇಳಿಕೆ ನೀಡಿದ್ದಾರೆ. ಸುಪ್ರೀಂಕೋರ್ಟ್ ನಿಯಮಾವಳಿ ಪ್ರಕಾರವೇ ಆರೋಪಿತನನ್ನು ಬಂಧಿಸಲಾಗಿದೆ. ತನಿಖೆ ಪ್ರಗತಿ ಹಂತದಲ್ಲಿದೆ.‌ ಈ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಜಾಮೀನು‌ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ವಾದ ಮಂಡಿಸಿದರು.‌ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಏಪ್ರಿಲ್ 15ಕ್ಕೆ ಆದೇಶ ಕಾಯ್ದಿರಿಸಿದೆ.

ಪ್ರಶಾಂತ್ ಜಾಮೀನು ಅರ್ಜಿ ವಜಾ:ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಸೂಚನೆಯಂತೆ ಕಚೇರಿಯಲ್ಲಿ 40 ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದ ಶಾಸಕರ ಪುತ್ರ ಪ್ರಶಾಂತ್‌ ಕುಮಾರ್‌ ಅವರಿಗೆ ಜಾಮೀನು ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಿರಾಕರಿಸಿದೆ. ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಎರಡನೇ ಆರೋಪಿಯಾದ ಪ್ರಶಾಂತ್‌ ಮಾಡಾಳ್​ ತನಿಖೆಗೆ ಸರಿಯಾಗಿ ಸಹಕರಿಸಿಲ್ಲ ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ. ಮೂರನೇ ಆರೋಪಿ ಸುರೇಂದ್ರ ಅವರ ಮೇಲೆ ಪ್ರಶಾಂತ್ ಮಾಡಾಳ್​ ಸೂಚನೆಯಂತೆ ಹಣವನ್ನು ವಾಹನದಲ್ಲಿ ಇಟ್ಟಿರುವುದು ಹೊರತುಪಡಿಸಿ ಬೇರೆ ಆರೋಪಗಳಿಲ್ಲ ಎಂದಿರುವ ಕೋರ್ಟ್ ಐದು ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಒದಗಿಸುವಂತೆ ತಿಳಿಸಿ ಸುರೇಂದ್ರ ಅವರಿಗೆ ಜಾಮೀನು ಅರ್ಜಿ ಪುರಸ್ಕರಿಸಿದೆ.

ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ಕಚ್ಚಾ ವಸ್ತುಗಳ ಪೂರೈಕೆ ಸಂಬಂಧ ಟೆಂಡರ್​ ನೀಡುವ ಸಲುವಾಗಿ, ಟೆಂಡರ್​ ಆಕಾಂಕ್ಷಿಗಳಿಂದ ಲಂಚ ಪಡೆಯುತ್ತಿರುವ ವೇಳೆ ಶಾಸಕ ವಿರೂಪಾಕ್ಷಪ್ಪ ಮಾಡಾಳ್​ ಅವರ ಪುತ್ರ ಪ್ರಶಾಂತ್​ ಮಾಡಾಳ್​ ಲೋಕಾಯುಕ್ತ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರು. ನಂತರದಲ್ಲಿ ಪ್ರಶಾಂತ್​ ಮಾಡಾಳ್​ ಹಾಗೂ ವಿರೂಪಾಕ್ಷಪ್ಪ ಮಾಡಾಳ್​ ಮನೆಗಳಗಳ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು ಕೋಟಿ ಕೋಟಿ ರೂ ಹಣ ವಶಕ್ಕೆ ಪಡೆದಿದ್ದರು.

ಈ ಪ್ರಕರಣದ ಬೆಳವಣಿಗೆಯಲ್ಲಿ ವಿರೂಪಾಕ್ಷಪ್ಪ ಮಾಡಾಳ್​ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಾಪತ್ತೆಯಾಗಿದ್ದ ಮಾಡಾಳ್​ ಜಾಮೀನು ಅರ್ಜಿ ವಜಾಗೊಳಿಸಿದ ಹಿನ್ನೆಲೆ ಲೋಕಾಯುಕ್ತ ಮಾಡಾಳ್​ ಅವರನ್ನು ಬಂಧಿಸಿತ್ತು. ನ್ಯಾಯಾಲಯ ಮಾಡಾಳ್​ ಅವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು.

ಇದನ್ನೂ ಓದಿ:ಮಾಡಾಳ್ ವಿರೂಪಾಕ್ಷಪ್ಪ ಐದು ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ: ವಿಶೇಷ ನ್ಯಾಯಾಲಯ ಆದೇಶ

ABOUT THE AUTHOR

...view details