ಬೆಂಗಳೂರು: ಬಿಟ್ ಕಾಯಿನ್ (Bitcoin scam) ಪ್ರಕರಣದಲ್ಲಿ ಸರ್ಕಾರದ ಪಾತ್ರವೂ ಇಲ್ಲ, ಪಾಲೂ ಇಲ್ಲ. ಇದರಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು, ಮುಖಂಡರಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ.
ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್‌ನಲ್ಲಿರುವ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಬಿಟ್ ಕಾಯಿನ್ ಪ್ರಕರಣವನ್ನು ಸ್ವತಃ ಸಿಎಂ ಇಡಿ(ED) ತನಿಖೆಗೆ ವಹಿಸಿದ್ದಾರೆ. ಹಾಗಾಗಿ, ನಮ್ಮ ಸರ್ಕಾರ ಮತ್ತು ಪಕ್ಷದ ಯಾವುದೇ ಪಾತ್ರವಿಲ್ಲ. ತನಿಖೆಯಾದ ನಂತರ ಸತ್ಯ ಹೊರಬರಲಿದೆ ಎಂದರು.
'ಬಿಟ್ ಕಾಯಿನ್ (Bitcoin) ವಿಚಾರದ ಕುರಿತು ಸದನದಲ್ಲಿ ಮಾತನಾಡುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಅಧಿವೇಶನದವರೆಗೆ ಯಾಕೆ ಕಾಯುತ್ತೀರಿ?. ಈಗಲೇ ಹೇಳಿ, ನೀವು ಸಿಎಂ ಆಗಿದ್ದವರು. ಈಗ ಪ್ರತಿಪಕ್ಷ ನಾಯಕರಾಗಿದ್ದೀರಿ. ದಾಖಲೆ ಇದ್ದರೆ ಬಿಡುಗಡೆ ಮಾಡಿ. ಯಾರು ಬೇಡ ಎನ್ನುತ್ತಾರೆ. ಆದರೆ, ಅದನ್ನು ಬಿಟ್ಟು ಸುಮ್ಮನೆ ಹಾವು ಇದೆ, ಹಾವು ಇದೆ ಎಂದು ಯಾಕೆ ಖಾಲಿ ಬುಟ್ಟಿ ತೋರಿಸುತ್ತಿದ್ದೀರಿ' ಎಂದು ಪ್ರಶ್ನಿಸಿದರು.
ವಯಸ್ಸಿನ ಕಾರಣಕ್ಕೆ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರೆ ಬಿಟ್ ಕಾಯಿನ್ ಪ್ರಕರಣದಿಂದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಬದಲಾಗಲಿದ್ದಾರೆ ಎನ್ನುವ ಮಾತು ಸುಳ್ಳು. ಯಡಿಯೂರಪ್ಪ ನಾಯಕತ್ವ ಬದಲಾವಣೆಯಾಗಲಿಲ್ಲ. ಮೋದಿ, ಅಮಿತ್ ಶಾ, ನಡ್ಡಾ ಅವರು ದೇಶದ ಯಾವುದೇ ನಾಯಕರಿಗೆ ಇಂತಹ ಅವಕಾಶ ಕೊಟ್ಟಿಲ್ಲ. ವಯಸ್ಸಾದರೂ ನನಗೆ ಅವಕಾಶ ಕೊಟ್ಟಿದ್ದಾರೆ. ಹಾಗಾಗಿ ಎರಡನೇ ಹಂತದ ನಾಯಕರು ಬೆಳೆಯಲಿ ಎಂದು ಸ್ವತಃ ಯಡಿಯೂರಪ್ಪ ರಾಜೀನಾಮೆ ಕೊಟ್ಟರೆ ಹೊರತು ನಾಯಕತ್ವವನ್ನು ಪಕ್ಷ ಬದಲಾವಣೆ ಮಾಡಲಿಲ್ಲ.
ಆದರೆ, ಹಾನಗಲ್ ಪ್ರಚಾರದಲ್ಲಿ ನೀವು ಯಡಿಯೂರಪ್ಪರನ್ನು ಇಳಿಸಿದರು ಎಂದು ಅಪಪ್ರಚಾರ ಮಾಡಿದಿರಿ. ಹಾನಗಲ್ನಲ್ಲಿ ನಿಮ್ಮ ಅಭ್ಯರ್ಥಿ ಓಡಾಟ ಮಾಡಿದ್ದರು. ಕೋವಿಡ್ ವೇಳೆ ಅವರು ಮಾಡಿದ ಕೆಲಸದ ಬಗ್ಗೆ ಅನುಕಂಪ ಇತ್ತು. ಹಾಗಾಗಿ, ಅವರಿಗೆ ಗೆಲುವು ಸಿಕ್ಕಿತು. ಈ ಗೆಲುವು ಮಾನೆಯದ್ದೆ ಹೊರತು, ಕಾಂಗ್ರೆಸ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರದ್ದು ಅಲ್ಲ. ಅವರು ಹಾನಗಲ್ನಲ್ಲಿ 7 ಸಾವಿರ ಮತಗಳ ಅಂತರದಲ್ಲಿ ಗೆದ್ದರೆ, ನಾವು ಸಿಂದಗಿಯಲ್ಲಿ 31 ಸಾವಿರ ಮತಗಳ ಅಂತರದ ಗೆಲುವು ಸಾಧಿಸಿದ್ದೇವೆ. ಸಿಂಧಗಿ ಉಪ ಚುನಾವಣೆ ಫಲಿತಾಂಶವೇ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆಯೇ ಹೊರತು, ಹಾನಗಲ್ ಅಲ್ಲ ಎಂದು ಹೇಳಿದರು.
'ಕಾಂಗ್ರೆಸ್ಸಿಗರದ್ದು ಹಗಲುಗನಸು'
'ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಂಜನಗೂಡು, ಗುಂಡ್ಲುಪೇಟೆ ಉಪ ಸಮರದಲ್ಲಿ ಅವರು ಗೆದ್ದಿದ್ದರು. ಆದರೆ, ನಾವು ಸಾರ್ವತ್ರಿಕ ಚುನಾವಣೆಯಲ್ಲಿ ಆ ಎರಡೂ ಕ್ಷೇತ್ರ ಗೆಲ್ಲುವ ಜೊತೆಗೆ ರಾಜ್ಯದಲ್ಲಿ ಅಧಿಕರಕ್ಕೂ ಬಂದೆವು. ಕಾಂಗ್ರೆಸ್ ಅನ್ನು ದೇಶ, ರಾಜ್ಯದಲ್ಲಿ ಜನ ತಿರಸ್ಕಾರ ಮಾಡಿದ್ದಾರೆ. ಎಲ್ಲೋ ಒಂದು ಕಡೆ ಭ್ರಮೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ, ಕಾಣಲಿ' ಎಂದು ವ್ಯಂಗ್ಯವಾಡಿದರು.