ಬೆಂಗಳೂರು : ಕೋರ್ಟ್ ಆದೇಶ ಧಿಕ್ಕರಿಸಿ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ಉದ್ದಿಮೆ ಪರವಾನಗಿ ನೀಡಿದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಈ ಹಿಂದೆ ಪಾಲಿಕೆ ಆಯುಕ್ತರಾಗಿದ್ದಎಂ.ಲಕ್ಷ್ಮೀನಾರಾಯಣ್ ಅವರಿಗೆ ನೀಡಲಾಗಿದ್ದ ಕ್ಲೀನ್‌ಚಿಟ್ ಆದೇಶವನ್ನು ರದ್ದುಪಡಿಸಿದೆ.
'ನಮ್ಮ ಬೆಂಗಳೂರು ಪೌಂಡೇಶನ್' ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ, ಎಂ. ಲಕ್ಷ್ಮೀನಾರಾಯಣ್‌ಗೆ ಕ್ಲೀನ್‌ಚಿಟ್ ನೀಡಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ
ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ಹೊಸದಾಗಿ ಉದ್ದಿಮೆ ಪರವಾನಗಿ ನೀಡಬಾರದು ಎಂದು 2016ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಆದರೆ, ಕೋರಮಂಗಲದ 8ನೇ ಮುಖ್ಯರಸ್ತೆಯಲ್ಲಿ ಕ್ಲಬ್ ಒಂದಕ್ಕೆ 2016ರ ಪಾಲಿಕೆ ಆಯುಕ್ತರಾಗಿದ್ದ ಎಂ.ಲಕ್ಷ್ಮೀನಾರಾಯಣ್ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ 'ನಮ್ಮ ಬೆಂಗಳೂರು ಫೌಂಡೇಶನ್' ಲಕ್ಷ್ಮೀ ನಾರಾಯಣರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿತ್ತು. ಈ ಬಗ್ಗೆ ಇಲಾಖಾ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, 2016ರ ಸೆ.29ರಂದು ಎಂ. ಲಕ್ಷ್ಮೀನಾರಾಯಣ್ ಅವರಿಗೆ ಕ್ಲೀನ್‌ಚಿಟ್ ನೀಡಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಮತ್ತೆ 'ನಮ್ಮ ಬೆಂಗಳೂರು ಫೌಂಡೇಶನ್' ಮತ್ತೆ ಹೈಕೋರ್ಟ್ ಮೆಟ್ಟಿಲೇರಿತ್ತು.