ಬೆಂಗಳೂರು:ಹದಿನೈದು ದಿನಗಳ ಅಂತರದಲ್ಲಿ ಎರಡನೇ ಗ್ರಹಣ ಇಂದು ಸಂಭವಿಸುತ್ತಿದೆ. ಇಂದು ಸಂಜೆ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿವೆ. ಮೋಕ್ಷದ ಬಳಿಕವಷ್ಟೇ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ.
ಪ್ರಮುಖವಾಗಿ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನ, ಕೋಟೆ ವೆಂಕಟೇಶ್ವರ ದೇವಸ್ಥಾನ, ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಸ್ಥಾನ, ಬಸವನಗುಡಿ ದೊಡ್ಡ ಗಣೇಶ, ಬನಶಂಕರಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಕ್ತರಿಗೆ ದರ್ಶನ ಪಡೆಯಲು ಅವಕಾಶವಿದೆ. ಮಧ್ಯಾಹ್ನದ ಬಳಿಕ ದೇಗುಲಗಳು ಮುಚ್ಚಲಿದ್ದು, ಸಂಜೆ ಗ್ರಹಣದ ಬಳಿಕವೇ ಶುದ್ಧಿಕಾರ್ಯ ನಡೆಸಿ ಅನುವು ಮಾಡಿಕೊಡಲಾಗುತ್ತದೆ.
ಈ ಕುರಿತು ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಸೋಮಸುಂದರ ದೀಕ್ಷಿತ್ ಮಾತನಾಡಿ, "ಗ್ರಹಣದಿಂದ ಸಾಕಷ್ಟು ತೊಂದರೆ ಆಗಬಹುದು. ಭರಣಿ ನಕ್ಷತ್ರ, ಮೇಷ ರಾಶಿಯವರಿಗೆ ಗ್ರಹಣ ತೊಂದರೆ ಸಾಧ್ಯತೆಯಿದೆ. ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ವಿಶೇಷ ಪೂಜೆ ಪುನಸ್ಕಾರ ನಡೆಯಲಿದೆ. ಮಧ್ಯಾಹ್ನ 12 ಗಂಟೆಯ ಬಳಿಕ ದೇವಸ್ಥಾನವನ್ನು ಬಂದ್ ಮಾಡಲಾಗುವುದು. ಸಂಜೆ 7 ಗಂಟೆಯ ಬಳಿಕ ಬಾಗಿಲು ತೆರೆದು ಶುದ್ಧೀಕರಣ ಮಾಡಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು" ಎಂದರು.
ನಗರದ ಬನಶಂಕರಿ ದೇವಾಲಯದಲ್ಲಿ ಬೆಳಗ್ಗೆ 5ರಿಂದ 10 ಗಂಟೆಯವರೆಗೆ ಪೂಜೆಗಳು ನಡೆಯಲಿವೆ. ಬಳಿಕ ದೇವಾಲಯದ ಬಾಗಿಲು ಮುಚ್ಚಿರಲಿದೆ. ಮಧ್ಯಾಹ್ನ 2.39 ರಿಂದ ಸಂಜೆ 6.15 ರವರೆಗೆ ಗ್ರಹಣದ ಕಾರಣಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧವಿದೆ. ದೇವಾಲಯವನ್ನು ಶುಚಿಗೊಳಿಸಿ ಸಂಜೆ 7.30 ರ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.