ಬೆಂಗಳೂರು:ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುವುದನ್ನು ತಡೆಯಲು ತಕ್ಷಣ ರಾಜ್ಯಾದ್ಯಂತ ಜಾನುವಾರುಗಳಿಗೆ ಲಸಿಕೆ ಹಾಕಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದು, ಐಎಹೆಚ್ ಮತ್ತು ವಿಬಿ ಯಿಂದ ತಕ್ಷಣ 15 ಲಕ್ಷ ಲಸಿಕೆ ಖರೀದಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುವುದನ್ನು ತಡೆಯುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪಶು ಸಂಗೊಪನಾ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ, 5 ಕೋಟಿ ರೂ.ಗಳನ್ನು ಲಸಿಕೆ ಖರೀದಿಗೆ ತಕ್ಷಣ ಬಿಡುಗಡೆ ಮಾಡುವಂತೆ ಹಾಗೂ 8 ಕೋಟಿ ರೂ. ಇತರ ಔಷಧ ಖರೀದಿಗೆ ಹಣ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಸೂಚನೆ ನೀಡಿದರು.
ಸೋಮವಾರದೊಳಗೆ ಎಲ್ಲ ಜಿಲ್ಲೆಗಳಿಗೂ ಲಸಿಕೆ ತಲುಪಿಸಬೇಕು. ಅತಿ ಹೆಚ್ಚು ರೋಗಕ್ಕೆ ತುತ್ತಾಗಿರುವ ಹಾವೇರಿ, ಗದಗ, ಬಳ್ಳಾರಿ, ವಿಜಯನಗರ ಬೆಳಗಾವಿ ಜಿಲ್ಲೆಗಳು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಯುದ್ಧೋಪಾದಿಯಲ್ಲಿ ಲಸಿಕೆ ಕಾರ್ಯ ಕೈಗೊಳ್ಳಲು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಬ್ಬಂದಿ ಕೊರತೆ ನೀಗಿಸಲು ಡಿಪ್ಲೊಮಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕು. ಮೃತಪಟ್ಟ ಜಾನುವಾರುಗಳಿಗೆ ತಕ್ಷಣ ಡಿಬಿಟಿ ಮೂಲಕ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಬೇಕು. ರಾಜ್ಯದ 28 ಜಿಲ್ಲೆಗಳ 160 ತಾಲೂಕುಗಳ 4380 ಗ್ರಾಮಗಳಲ್ಲಿ ರೋಗ ಕಾಣಿಸಿಕೊಂಡಿದೆ. 45,645 ಜಾನುವಾರುಗಳು ರೋಗಕ್ಕೆ ತುತ್ತಾಗಿದ್ದು, 26,135 ಜಾನುವಾರುಗಳು ಮರಣ ಹೊಂದಿವೆ. 50 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕುವಂತೆ ಸೂಚಿಸಿದರು.