ಬೆಂಗಳೂರು : ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳು ಜಾರಿಯಲ್ಲಿವೆ. ಈ ಯೋಜನೆಗಳಿಗೆ ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರ ಅನುದಾನ ಒದಗಿಸುತ್ತದೆ. ಇತ್ತ ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅತ್ತ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರದ ಅನುದಾನ ಬಿಡುಗಡೆ ವಿಳಂಬವಾಗುತ್ತಿದೆ.
ಹೌದು, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವೂ ಅನುದಾನ ನೀಡುತ್ತದೆ. ಹಲವು ಪ್ರಮುಖ ಯೋಜನೆಗಳಿಗೆ ಕೇಂದ್ರದ ಹಣ ಬಹುಪಾಲು ಇದೆ. ಆದರೆ, ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಹೋದ ಬಳಿಕ ರಾಜ್ಯದ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಬಿಡುಗಡೆ ವೇಗಕ್ಕೆ ಬ್ರೇಕ್ ಬಿದ್ದಂತೆ ಕಾಣುತ್ತಿದೆ. ಹೊಸ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿದೆಯಾ ಎಂಬ ಪ್ರಶ್ನೆ ಮೂಡುತ್ತಿದೆ. 2023-24 ಸಾಲಿನ ಆರ್ಥಿಕ ವರ್ಷದಲ್ಲಿ ನಾಲ್ಕು ತಿಂಗಳು ಕಳೆದಿದ್ದು, ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಕುಂಠಿತವಾಗಿದೆ.
ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಕುಂಠಿತ: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ನೀಡಿದ ಮಾಹಿತಿಯಂತೆ 2023-24 ಸಾಲಿನಲ್ಲಿ ನಾಲ್ಕು ತಿಂಗಳು ಕಳೆದಿದ್ದು, ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಕುಂಠಿತವಾಗಿದೆ. ನಾಲ್ಕು ತಿಂಗಳಲ್ಲಿ ಕೇವಲ 11.13% ಮಾತ್ರ ಪ್ರಗತಿ ಕಂಡಿದ್ದು, ಕಳೆದ ಬಾರಿ ಇದೇ ಅವಧಿಗೆ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ 23% ಆಗಿತ್ತು.
2023-24ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಒಟ್ಟು 36,887.57 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಈ ಪೈಕಿ ರಾಜ್ಯದ ಪಾಲಿಗೆ ಹಂಚಿಕೆಯಾದ ಅನುದಾನ 18,499.96 ಕೋಟಿ ರೂ. ಹಾಗೂ ಕೇಂದ್ರದಿಂದ ಹಂಚಿಕೆಯಾದ ಅನುದಾನ 18,387.61 ಕೋಟಿ ರೂ. ಸುಮಾರು 29 ವಿವಿಧ ಇಲಾಖೆಗಳಲ್ಲಿ ಹಲವು ಕೇಂದ್ರ ಪುರಸ್ಕೃತ ಯೋಜನೆಗಳು ಜಾರಿಯಲ್ಲಿವೆ. 2022-23 ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಒಟ್ಟು 27,387.95 ಕೋಟಿ ರೂ. ಅನುದಾನ ಹಂಚಿಕೆಯಾಗಿತ್ತು. ಈ ಪೈಕಿ ರಾಜ್ಯ ಸರ್ಕಾರ 14,257.57 ಕೋಟಿ ರೂ. ಅನುದಾನ ಹಂಚಿಕೆ ಮಾಡಿತ್ತು. ಕೇಂದ್ರ ಸರ್ಕಾರ 13,130.38 ಕೋಟಿ ರೂ. ಅನುದಾನ ಹಂಚಿಕೆ ಮಾಡಿತ್ತು.