ಬೆಂಗಳೂರು: ಮನೆ ಬಾಡಿಗೆ ಕೇಳುವ ನೆಪದಲ್ಲಿ ಮಾಲೀಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ಇಬ್ಬರು ಪ್ರೇಮಿಗಳನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರ ಪೊಲೀಸ್ ಠಾಣೆ ರೌಡಿಶೀಟರ್ ವಿನಯ್ ಹಾಗೂ ಪ್ರಿಯತಮೆ ಕೀರ್ತನಾ ಎಂಬುವವರನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಕೊಲೆ ಯತ್ನ, ಹಲ್ಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿಶೀಟರ್ ಆಗಿದ್ದ ವಿನಯ್ ಬಾಗಲಗುಂಟೆಯಲ್ಲಿ ವಾಸ ಮಾಡುತ್ತಿದ್ದ. ಕಳೆದ ಮೂರು ವರ್ಷಗಳ ಹಿಂದೆ ಕೀರ್ತನಾಳ ಪರಿಚಯ ಮಾಡಿಕೊಂಡಿದ್ದ. ಕಾಲ ಕ್ರಮೇಣ ಇಬ್ಬರು ಪ್ರೇಮಿಗಳಾಗಿದ್ದಾರೆ.
ಡಿಸಿಪಿ ಸಂಜೀವ್ ಪಾಟೀಲ್ ಮಾತನಾಡಿದ್ದಾರೆ ಎಸ್ಎಸ್ಎಲ್ಸಿಯಲ್ಲಿ ಅನುತ್ತೀರ್ಣಗೊಂಡಿದ್ದ ಕೀರ್ತನಾಳಿಗೆ ಕೆಲಸವಿರಲಿಲ್ಲ. ವಿನಯ್ ಸಹ ರೌಡಿಶೀಟರ್ ಆಗಿದ್ದರಿಂದ ಏರಿಯಾದಲ್ಲಿ ಓಡಾಡಿಕೊಂಡಿದ್ದ. ಇವರಿಬ್ಬರೂ ಮೋಜು - ಮಸ್ತಿ ಮಾಡಬೇಕೆಂಬ ತುಡಿತ ಹೊಂದಿದ್ದರು. ಆದರೆ, ಕೈಯಲ್ಲಿ ಹಣವಿಲ್ಲದೇ ಹತಾಶರಾಗಿದ್ದರು. ಮತ್ತೊಂದೆಡೆ ಲಾಂಗ್ ಡ್ರೈವ್ಗೆ ಕರೆದುಕೊಂಡು ಹೋಗಿ ಉಡುಗೊರೆ ಕೊಡಿಸುವಂತೆ ಕೀರ್ತನಾ ಪೀಡಿಸುತ್ತಿದ್ದಳಂತೆ.
ನಿನ್ನಂಥ ರೌಡಿನೇ ಪ್ರೀತಿಸ್ತೇನಿ
ನಾನು ರೌಡಿ ಎಂದು ಗೊತ್ತಿದ್ದರೂ ಪ್ರೀತಿಸಿ ಅದು - ಇದು ಎಂದು ಯಾಕೆ ಕೇಳುತ್ತೀಯಾ ಎಂದು ವಿನಯ್ ಕಿಚಾಯಿಸ್ತಿದ್ದ. ನಿನ್ನಂಥ ರೌಡಿನೇ ಪ್ರೀತಿಸಿದ್ದೇನೆ. ನಿನಗಾಗಿ ಏನು ಬೇಕಾದರೂ ಮಾಡುತ್ತೇನೆ. ಜೈಲಿಗೂ ಹೋಗಲು ಸಿದ್ಧ ಎಂದಿದ್ದಳಂತೆ ಕೀರ್ತನಾ. ಇದರಂತೆ ವಿನಯ್ ತನ್ನ ಜೊತೆ ಕಳ್ಳತನಕ್ಕೆ ಪ್ರಿಯತಮೆ ಕೀರ್ತನಾಳನ್ನು ಕರೆದುಕೊಂಡು ಹೋಗುತ್ತಿದ್ದ.
ಅಂದು ನಡೆದಿದ್ದೇನು?
ಕಳೆದ ಅ.4 ರಂದು ಮಾರುತಿ ನಗರದ ಕುಲಶೇಖರ್ ಎನ್ನುವವರ ಮನೆಗೆ ವಿನಯ್ ಹಾಗೂ ಕೀರ್ತನಾ ಬಾಡಿಗೆ ಮನೆ ಕೇಳುವ ನೆಪದಲ್ಲಿ ತೆರಳಿದ್ದರು. ನಾವಿಬ್ಬರು ದಂಪತಿ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಮನೆ ಮಾಲೀಕರ ಜೊತೆ ವಿನಯ್ ಮಾತಿಗಿಳಿದಿದ್ದ. ವಿನಯ್, ಕುಲಶೇಖರ್ ಜೊತೆ ಮಾತಾಡುತ್ತಿದ್ದರೆ ಇತ್ತ ಕೀರ್ತನಾ ಮಾಲೀಕರ ಮನೆಯಲ್ಲಿದ್ದ 1 ಮೊಬೈಲ್, 1 ಲ್ಯಾಪ್ಟಾಪ್ ಹಾಗೂ 15 ಸಾವಿರ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಳು.
ನಂತರ ಮನೆ ಮಾಲೀಕರು ಲ್ಯಾಪ್ಟಾಪ್ ಕಾಣಿಸದಿರುವುದನ್ನು ಕಂಡು ಅನುಮಾನಗೊಂಡಿದ್ದಾರೆ. ನಂತರ ಮನೆಯ ಕೋಣೆಗೆ ಅಳವಡಿಸಿದ್ದ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಆಗ ಮನೆ ಬಾಡಿಗೆಗೆ ಬಂದವರು ಎಸಗಿದ ಕೃತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಮನೆ ಮಾಲೀಕ ಕುಲಶೇಖರ್ ಕೊಟ್ಟ ದೂರಿನನ್ವಯ ಸದ್ಯ ಇಬ್ಬರು ಆರೋಪಿಗಳನ್ನು ಚಂದ್ರ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಓದಿ:ಸಬ್ಇನ್ಸ್ಪೆಕ್ಟರ್ ಕೆಲಸ ಕೊಡಿಸ್ತೀನೆಂದು ₹18 ಲಕ್ಷ ಪಡೆದಿದ್ದ ವಂಚಕ ಅರೆಸ್ಟ್.. ಅವನು ಮಾಡಿದ್ದಿಷ್ಟೇ..