ಬೆಂಗಳೂರು: ಪ್ರೀತಿ ಮಾಯೆ ಹುಷಾರು ಎಂಬ ಮಾತಿದೆ. ಪ್ರೀತಿ ಸಿಕ್ಕಿಲ್ಲ ಎಂಬ ಕಾರಣಕ್ಕಾಗಿ ಜನರು ಅಪರಾಧ ಕೃತ್ಯವೆಸಗುವುದಕ್ಕೂ ಹಿಂಜರಿಯುವುದಿಲ್ಲ. ಪ್ರೇಮ ವೈಫಲ್ಯ ಅಥವಾ ತನ್ನ ಪ್ರೀತಿ ಪರರ ಪಾಲಾಗುತ್ತಿದೆ ಎಂಬ ಹೊಟ್ಟೆ ಕಿಚ್ಚಿಗೆ ಅಕ್ರೋಶಗೊಂಡು ಕೊಲೆ ಪ್ರಕರಣಗಳಲ್ಲಿ ಭಾಗಿಯಾವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಹತ್ಯೆಗಳ ಪೈಕಿ 215 ಕೊಲೆಗಳು ಲವ್ ಗಾಗಿಯೇ ನಡೆದಿವೆ ಎಂಬುದು ಆತಂಕಕಾರಿ ಸಂಗತಿಯಾಗಿದೆ.
ಭವಿಷ್ಯದ ಅರಿವಿಲ್ಲದೆ ಅಪರಾಧ ಕೃತ್ಯ.. 2018 ರಿಂದ 2022 ರವರೆಗೆ ರಾಜ್ಯದಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿ 215 ಮರ್ಡರ್ ಕೇಸ್ಗಳು ಪ್ರೀತಿ-ಪ್ರೇಮದ ವಿಚಾರಕ್ಕಾಗಿಯೇ ನಡೆದಿವೆ. ವರ್ಷಕ್ಕೆ ಸರಾಸರಿ 43 ಕೇಸ್ಗಳು ಇದೇ ಕಾರಣಕ್ಕಾಗಿ ನಡೆದಿವೆ. 2018ರಲ್ಲಿ 60 ಕೊಲೆಗಳು ಪ್ರೀತಿಗಾಗಿಯೇ ನಡೆದಿವೆ. ಇನ್ನು, ಕೋವಿಡ್ ಸೋಂಕು ಕಾಣಿಸಿಕೊಂಡ 2020ರಲ್ಲಿ 60 ಮರ್ಡರ್ ಕೇಸ್ಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ಅಂಕಿ ಅಂಶಗಳಿಂದಲೇ ತಿಳಿದುಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರೀತಿಯ ಬಲೆಗೆ ಬೀಳುವ ಯುವ ಜನಾಂಗ ತಮಗೆ ಗೊತ್ತಾಗಿಯೋ-ಗೊತ್ತಿಲ್ಲದಂತೆಯೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಒಂದು ಕ್ಷಣ ಆಲೋಚಿಸದೆ ಲವ್ಗಾಗಿ ದುಷ್ಟ ಮಾರ್ಗ ಹಿಡಿದು ತಮ್ಮ ಸುಂದರವಾದ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.
ದ್ವೇಷ, ಕೋಪದ ಕೈಗೆ ಬುದ್ಧಿ ಕೊಡುವ ಯುವಜನಾಂಗ.. ಪ್ರೀತಿಸುತ್ತಿದ್ದ ಹುಡುಗಿ ಬೇರೆಯವನೊಂದಿಗೆ ಸುತ್ತಾಡುತ್ತಿದ್ದಾಳೆ ಎಂಬುದಕ್ಕೋ, ತನ್ನನ್ನು ತಿರಸ್ಕರಿಸಿದಳು ಎಂಬ ಕಾರಣಕ್ಕೋ ಅಥವಾ ತಮ್ಮ ಪ್ರೀತಿಗೆ ಅಡ್ಡಿಬಂದವರನ್ನು ಪ್ರಾಣ ತೆಗೆದಾದರೂ ಸರಿ, ನಾವು ಒಂದಾಗೋಣ ಎಂಬ ಮನಸ್ಥಿತಿಯಿಂದ ಹೇಯ ಕೃತ್ಯಕ್ಕೆ ಹಿಂದೇಟು ಹಾಕುತ್ತಿಲ್ಲ. ಹೆಚ್ಚಾಗಿ ಪ್ರೀತಿ ನಿರಾಕರಿಸಿದ ಪ್ರಿಯತಮೆ ಮೇಲೆ ಕೋಪದ ಕೈಗೆ ಬುದ್ಧಿ ಕೊಟ್ಟಿದ್ದಾರೆ. ಕಳೆದ ವರ್ಷ ಏಪ್ರಿಲ್ 28ರಂದು ತನ್ನ ಪ್ರೀತಿ ಧಿಕ್ಕರಿಸಿದ್ದ ಯುವತಿ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದ ನಾಗರಾಜ್ ಎಂಬಾತನನ್ನು ಬಂಧಿಸಲಾಗಿತ್ತು. ಅದೃಷ್ಟವಶಾತ್ ಸಂತ್ರಸ್ತೆ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಳ್ಳುತ್ತಿದ್ದಾಳೆ.