ಬೆಂಗಳೂರು:ಭಾನುವಾರದ ಕರ್ಫ್ಯೂ ಇದ್ದರೂ ಮಾಂಸ ವ್ಯಾಪಾರಕ್ಕೆ ಏನು ಪರಿಣಾಮ ಬೀಳಲ್ಲ ಅಂದುಕೊಂಡಿದ್ದ ವ್ಯಾಪಾರಿಗಳಿಗೆ ಮಾಂಸ ಪ್ರಿಯರು ಶಾಕ್ ಕೊಟ್ಟಿದ್ದಾರೆ.
ಮಾಂಸ ವ್ಯಾಪಾರಿಗಳಿಗೆ ಭಾರಿ ನಷ್ಟ ಮಾರ್ಚ್ 20ರ ನಂತರ ಅಷ್ಟಾಗಿ ವ್ಯಾಪಾರ ಕಾಣದ ಮಾಂಸ ಉದ್ಯಮ, ಇಂದು ಒಂದಿಷ್ಟು ಗ್ರಾಹಕರನ್ನು ನಿರೀಕ್ಷಿಸಿತ್ತು. ಅಗತ್ಯವಸ್ತುಗಳ ಪಟ್ಟಿಯಲ್ಲಿ ಮಾಂಸವನ್ನು ಸೇರಿಸಿ ಸರ್ಕಾರ ಇವರ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿತ್ತು. ಆದರೆ, ಜನರಲ್ಲಿ ಆತಂಕ ಇನ್ನೂ ದೂರವಾಗದ ಹಿನ್ನೆಲೆ ಗ್ರಾಹಕರ ಬರ ಎದುರಾಗಿದೆ. ಕೊರೊನಾ ಆತಂಕಕ್ಕೆ ಮುನ್ನ ಜನರಲ್ಲಿದ್ದ ಮಾಂಸ ಸೇವನೆಯ ಆಸಕ್ತಿ ಸಾಕಷ್ಟು ಕಡಿಮೆಯಾಗಿರುವುದು ಗೋಚರಿಸುತ್ತಿದೆ. ಮಾರುಕಟ್ಟೆಗೆ ಬಂದು ಮಾಂಸ ಖರೀದಿ ಮಾಡಲು ಜನ ಇನ್ನಷ್ಟು ಸಮಯ ಪಡೆಯಲಿದ್ದಾರೆ ಎಂಬುದು ಇಂದು ಸ್ಪಷ್ಟವಾಗಿದೆ.
ಹಣದ ಕೊರತೆ
ಮಹಾನಗರದಲ್ಲಿ 1.3 ಕೋಟಿ ಜನಸಂಖ್ಯೆಯಿದ್ದು, ಇವರಲ್ಲಿ ಶೇ 70ರಷ್ಟು ಮಂದಿ ಮಾಂಸಹಾರಿಗಳಿದ್ದಾರೆ. ವಾರದಲ್ಲಿ ಕನಿಷ್ಠ ಒಂದು ದಿನವಾದರೂ ಮಾಂಸ ಸೇವಿಸುವ ರೂಢಿ ಬೆಳೆಸಿಕೊಂಡು ಬಂದವರಿದ್ದಾರೆ. ವಾರಕ್ಕೆ ಎರಡರಿಂದ ಮೂರು ದಿನ ಮಾಂಸಹಾರ ಸೇವಿಸುವವರು ಸಾಕಷ್ಟು ಸಂಖ್ಯೆಯಲ್ಲಿದೆ. ಭಾನುವಾರ ಬಂತೆಂದರೆ ವಿಶೇಷ ಮಾಂಸದೂಟಕ್ಕೆ ಆದ್ಯತೆ ನೀಡುವವರ ಬಹುತೇಕ ಮಂದಿ ಇದ್ದಾರೆ.
ಕೊರೊನಾ ದಾಳಿಯ ಹಿನ್ನೆಲೆ ಉಂಟಾದ ಆರ್ಥಿಕ ಹೊಡೆತ, ಮಾಂಸದ ಮಾರಾಟ ಉದ್ಯಮದ ಮೇಲೂ ಪರಿಣಾಮ ಬೀರಿದೆ. ಸಾಕಷ್ಟು ಸಂಖ್ಯೆಯಲ್ಲಿ ಜನ ಬೆಂಗಳೂರನ್ನು ತೊರೆದಿದ್ದಾರೆ. ಇರುವವರಲ್ಲಿ ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರ ವೇತನ ಕಡಿತವಾಗಿದೆ. ಇದೆಲ್ಲದರ ಜೊತೆಗೆ ಕೊರೊನಾ ಆತಂಕ ಹೆಚ್ಚಾಗಿರುವುದರಿಂದ ಜನ ಮಾಂಸ ಖರೀದಿಗೆ ಅಷ್ಟೊಂದು ಉತ್ಸಾಹ ತೋರಿಸುತ್ತಿಲ್ಲ.